ಹಣ್ಣುಗಳ ರಾಜ ಎಂದೇ ಹೇಳಲಾಗುವ ಮಾವು ಈ ಬಾರಿ ಸೀಸನ್ ನಲ್ಲಿಯೂ ಮಾರುಕಟ್ಟೆಯಲ್ಲಿ ಅಬ್ಬರ ಕಾಣುತ್ತಿಲ್ಲ. ಒಂದೊಮ್ಮೆ ಹಣ್ಣುಗಳು ಕಂಡರೂ ಸಹ ದುಬಾರಿಯಾಗಿರುತ್ತವಲ್ಲದೆ ಕಾಯಿ ಬಲಿಯುವ ಮುನ್ನವೇ ಕೊಯ್ದು ಹಣ್ಣು ಮಾಡುವ ಕಾರಣ ರುಚಿಯೂ ಅಷ್ಟಾಗಿ ಇರುತ್ತಿಲ್ಲ.
ಹವಾಮಾನ ವೈಪರೀತ್ಯದ ಕಾರಣದಿಂದ ಇಳುವರಿ ಭಾರಿ ಕುಸಿತವಾಗಿರುವುದರಿಂದ ನಿರೀಕ್ಷಿಸಿದಷ್ಟು ಮಾವು ಮಾರುಕಟ್ಟೆಗೆ ಬರುತ್ತಿಲ್ಲ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ ರಾಜ್ಯದಲ್ಲಿ ಪ್ರತಿವರ್ಷ 14 ಲಕ್ಷ ಟನ್ ಮಾವು ಬರುತ್ತಿದ್ದು, ಈ ಬಾರಿ ಇದು 4 ಲಕ್ಷ ಟನ್ ಸಹ ದಾಟಿಲ್ಲ ಎನ್ನಲಾಗಿದೆ.
ಈ ಮೊದಲು ಮಾರ್ಚ್ ತಿಂಗಳಿನಿಂದಲೇ ಮಾರುಕಟ್ಟೆಯಲ್ಲಿ ಮಾವಿನ ಹಣ್ಣು ತನ್ನ ದರ್ಬಾರು ಆರಂಭಿಸುತ್ತಿದ್ದು, ಆದರೆ ಈ ಬಾರಿ ಏಪ್ರಿಲ್ ಕಳೆದು ಮೇ ತಿಂಗಳ ಎರಡನೇ ವಾರಕ್ಕೆ ಕಾಲಿಟ್ಟರೂ ಸಹ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುತ್ತಿಲ್ಲ. ಇದು ಮಾವು ಪ್ರಿಯರನ್ನು ನಿರಾಸೆಗೊಳಿಸಿದೆ.