ಸರ್ಕಾರಿ ಸಂಸ್ಥೆಗಳು, ಬ್ಯಾಂಕ್‌ಗಳು ಮತ್ತು ವಿಮಾನಯಾನ ಸಂಸ್ಥೆಗಳನ್ನು ಖಾಸಗಿಯವರಿಗೆ ವಹಿಸಿಕೊಟ್ಟ ಬೆನ್ನಲ್ಲೇ ರಾಜಧಾನಿಯ ಹೆಮ್ಮೆ ಎನಿಸಿರುವ ಅಶೋಕ ಹೋಟೆಲ್ ಕೂಡ ಮಾರಾಟದ ಹಾದಿ ಹಿಡಿದಿದೆ. ಆಪರೇಟ್-ಮೇಂಟೆನ್-ಡೆವಲಪ್ (ಒಎಂಡಿ) ಮಾದರಿಯಲ್ಲಿ 60 ವರ್ಷಗಳ ಕಾಲ ಹೋಟೆಲ್ ಅನ್ನು ಗುತ್ತಿಗೆ ನೀಡಲು ಸರ್ಕಾರ ಯೋಜಿಸಿದೆ.
ಇದಲ್ಲದೇ 6.3 ಎಕರೆ ಹೋಟೆಲ್ ಭೂಮಿಯನ್ನು ಪಿಪಿ ಮಾದರಿಯಲ್ಲಿ ವಾಣಿಜ್ಯ ಬಳಕೆಗೆ ಮಾರಾಟ ಮಾಡಲಾಗುವುದು. ಇದನ್ನು ಹೊಸದಾಗಿ ಅಭಿವೃದ್ಧಿಪಡಿಸಲು 450 ಕೋಟಿ ರೂಪಾಯಿ ವೆಚ್ಚ ಮಾಡಲು ಯೋಜನೆ ರೂಪಿಸಲಾಗಿದೆ. ಇದು ದೇಶದ ಮೊಟ್ಟ ಮೊದಲ ಫೈವ್ ಸ್ಟಾರ್ ಹೋಟೆಲ್.
ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು 1960ರ ದಶಕದಲ್ಲಿ ಯುನೆಸ್ಕೋ ಸಮ್ಮೇಳನಕ್ಕಾಗಿ ಇದನ್ನು ನಿರ್ಮಿಸಿದರು.ಆಗ ಈ ಹೋಟೆಲ್ ನಿರ್ಮಾಣಕ್ಕೆ ಮೂರು ಕೋಟಿ ರೂಪಾಯಿ ವೆಚ್ಚವಾಗಿತ್ತು. ಆ ಕಾಲದಲ್ಲಿ 10 ಗ್ರಾಂ ಬಂಗಾರದ ಬೆಲೆ 90 ರೂಪಾಯಿ, ಈಗ 52 ಸಾವಿರ. ಅಂದರೆ ಈ ಹೋಟೆಲ್ ಬೆಲೆ ಕೂಡ ಎಷ್ಟಾಗಿರಬಹುದು ಅನ್ನೋದನ್ನು ನಾವೇ ಊಹಿಸಬಹುದು. ಅಶೋಕ್ ಹೋಟೆಲ್ 11 ಎಕರೆಗಳಷ್ಟು ವಿಸ್ತಾರವಾಗಿದೆ.
ಹೋಟೆಲ್‌ನ ಹೆಚ್ಚುವರಿ ಜಮೀನಿನಲ್ಲಿ ಪಿಪಿಪಿ ಮಾದರಿಯಲ್ಲಿ ಐಷಾರಾಮಿ ಅಪಾರ್ಟ್ಮೆಂಟ್‌ಗಳನ್ನು ನಿರ್ಮಿಸಲಾಗುವುದು. ಇದು ದೇಶದ ಮೊದಲ ಪಂಚತಾರಾ ಸರ್ಕಾರಿ ಹೋಟೆಲ್, ಇಲ್ಲಿ 550 ಕೊಠಡಿಗಳಿವೆ. ಸುಮಾರು 2 ಲಕ್ಷ ಚದರ ಅಡಿಗಳಷ್ಟು ಜಾಗವಿದೆ. 30 ಸಾವಿರ ಚದರ ಅಡಿಗಳಲ್ಲಿ ಔತಣಕೂಟಗಳು ಮತ್ತು 25 ಸಾವಿರ ಚದರ ಅಡಿಗಳಲ್ಲಿ ಎಂಟು ರೆಸ್ಟೋರೆಂಟ್‌ಗಳನ್ನು ಇದು ಒಳಗೊಂಡಿದೆ. ಪ್ರಸ್ತುತ ಅಶೋಕ್ ಹೋಟೆಲ್ ಮಾಲೀಕತ್ವವು ಸರ್ಕಾರಿ ಕಂಪನಿ ಐಟಿಡಿಸಿಯಲ್ಲಿದೆ.
ಇದನ್ನು OMD ಮಾದರಿಯ ಅಡಿಯಲ್ಲಿ ಗುತ್ತಿಗೆಗೆ ನೀಡಲು ನಿರ್ಧರಿಸಲಾಗಿದೆ. ಇದನ್ನು ವಿಶ್ವದ ಪ್ರಸಿದ್ಧ ಹೆರಿಟೇಜ್ ಹೋಟೆಲ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಖಾಸಗಿ ಪಾಲುದಾರರು ಮಾತ್ರ ಹೋಟೆಲ್ ಅನ್ನು ನಿರ್ವಹಿಸುತ್ತಾರೆ. ಹೋಟೆಲ್ ಬಳಿ ಇರುವ 6.3 ಎಕರೆ ಜಾಗದಲ್ಲಿ 600 ರಿಂದ 700 ಪ್ರೀಮಿಯಂ ಸರ್ವೀಸ್ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಲಾಗುವುದು.ಆ ಸಮಯದಲ್ಲಿ ನೆಹರೂ ಅವರ ಮನವಿಯ ಮೇರೆಗೆ, ರಾಜರ ಸಂಸ್ಥಾನಗಳ ಹಿಂದಿನ ಆಡಳಿತಗಾರರು ಇದರ ನಿರ್ಮಾಣಕ್ಕೆ ಕೊಡುಗೆ ನೀಡಿದರು.
ಅವರ ಕಡೆಯಿಂದ 10 ರಿಂದ 20 ಲಕ್ಷ ದೇಣಿಗೆ ನೀಡಲಾಯಿತು. ಉಳಿದ ವೆಚ್ಚವನ್ನು ಕೇಂದ್ರ ಸರಕಾರವೇ ಭರಿಸಿತ್ತು. ಮುಂಬೈ ಮೂಲದ ಆರ್ಕಿಟೆಕ್ಟ್ ಬಿ.ಇ. ಡಾಕ್ಟರ್ ಅವರಿಗೆ ಅಶೋಕ ಹೋಟೆಲ್‌ನ ವಿನ್ಯಾಸ ಮತ್ತು ನಿರ್ಮಾಣದ ಜವಾಬ್ಧಾರಿ ವಹಿಸಲಾಗಿತ್ತು. ನೆಹರೂ ಅವರು ಹೊಟೇಲ್ ನಿರ್ಮಾಣದ ಅವಲೋಕನಕ್ಕೆ ಆಗಾಗ ಕುದುರೆಯ ಮೇಲೆ ಬರುತ್ತಿದ್ದರು.