ಟೀಂ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ಕ್ಯಾನ್ಸರ್ ಮಹಾಮಾರಿಯನ್ನೇ ಗೆದ್ದು ಬಂದಿದ್ದು ನಮಗೆಲ್ಲ ಗೊತ್ತೇ ಇದೆ. 2011ರ ಕ್ರಿಕೆಟ್ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುವರಾಜ್ ಸಿಂಗ್ ಗೆ ‘ಮೆಡಿಯಾಸ್ಟೈನಲ್ ಸೆಮಿನೋಮಾ’ ಎಂಬ ಅಪರೂಪದ ಕ್ಯಾನ್ಸರ್ ಇತ್ತು. ಯುವರಾಜ್ ಸಿಂಗ್, ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದು ಮತ್ತೆ ಕ್ರಿಕೆಟ್ ಆಡಲು ಪ್ರಾರಂಭಿಸಿದ್ದರು. ಇದೀಗ ಮತ್ತೊಬ್ಬ ಆಟಗಾರ ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ.
ಇತ್ತೀಚೆಗಷ್ಟೆ ತಾವು ಕ್ಯಾನ್ಸರ್ ಮಹಾಮಾರಿಯಿಂದ ಬಳಲುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. ಈ ಆಟಗಾರನಿಗೆ ಕೇವಲ 31 ವರ್ಷ. ಇಂಗ್ಲೆಂಡ್‌ನ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಸ್ಯಾಮ್ ಬಿಲ್ಲಿಂಗ್ಸ್ ಚರ್ಮದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರಂತೆ. ದೀರ್ಘಕಾಲ ಬಿಸಿನಲ್ಲಿ ಉಳಿದಿದ್ದರಿಂದಲೇ ಈ ಕ್ಯಾನ್ಸರ್ ಅವರನ್ನು ಆವರಿಸಿಕೊಂಡಿದೆ. ಹಾಗಾಗಿ ಸಹ ಆಟಗಾರರಲ್ಲಿ ಈ ಬಗ್ಗೆ ಸ್ಯಾಮ್ ಬಿಲ್ಲಿಂಗ್ಸ್ ಜಾಗೃತಿ ಮೂಡಿಸಲು ಬಯಸುತ್ತಾರೆ.
ಎದೆಯಿಂದ ಮಾರಣಾಂತಿಕ ಮೆಲನೋಮವನ್ನು ತೆಗೆದುಹಾಕಲು ಬಿಲ್ಲಿಂಗ್ಸ್ ಕಳೆದ ವರ್ಷ ಎರಡು ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಂಡಿದ್ದರು. ಕೌಂಟಿ ತಂಡ ಕೆಂಟ್‌ನಲ್ಲಿ ದಿನನಿತ್ಯದ ತಪಾಸಣೆಯ ಸಮಯದಲ್ಲಿ ಬಿಲ್ಲಿಂಗ್ಸ್‌ಗೆ ಚರ್ಮದ ಕ್ಯಾನ್ಸರ್ ಇರುವುದು ಪತ್ತೆಯಾಯ್ತು. ಅವರ ದೇಹದಲ್ಲಿ 0.6 ಮಿಮೀ ಆಳದ ಮೆಲನೋಮಾ ಇತ್ತು. ಅದು 0.7 ಮಿಮೀ ಆಳಕ್ಕೆ ಬಂದಾಗ ದೇಹಸ್ಥಿತಿ ಗಂಭೀರವಾಗುತ್ತದೆ. ಹಾಗಾಗಿ ಕೂಡಲೇ ಬಿಲ್ಲಿಂಗ್ಸ್ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಈ ಕಾಯಿಲೆಯ ಅಪಾಯಗಳ ಬಗ್ಗೆ ಸಹ ಆಟಗಾರರಿಗೆ ಅವರು ಎಚ್ಚರಿಕೆ ನೀಡಿದ್ದಾರೆ. ಸ್ಯಾಮ್ ಬಿಲ್ಲಿಂಗ್ಸ್ ಇದುವರೆಗೆ ಇಂಗ್ಲೆಂಡ್ ಪರ ಮೂರು ಟೆಸ್ಟ್, 28 ODI ಮತ್ತು 37 T20 ಪಂದ್ಯಗಳನ್ನು ಆಡಿದ್ದಾರೆ. ಸದ್ಯ ಕೌಂಟಿ ಕ್ರಿಕೆಟ್ ಆಡುತ್ತಿದ್ದಾರೆ. ಅತಿಯಾಗಿ ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ ಈ ಕಾಯಿಲೆ ಆವರಿಸಿಕೊಳ್ಳುತ್ತದೆ. ತಾಪಮಾನವು 18 ಡಿಗ್ರಿಗಳಷ್ಟಿದ್ದರೂ ತೊಂದರೆಗೊಳಗಾಗಬಹುದು. ಕ್ರಿಕೆಟಿಗರು ಈ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಈ ಅಪಾಯದ ವಿರುದ್ಧ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕೆಂದು ಸ್ಯಾಮ್ ಬಿಲ್ಲಿಂಗ್ಸ್ ಒತ್ತಾಯಿಸಿದ್ದಾರೆ.