
ಮಳೆಗಾಲದಲ್ಲಿ ವಾತಾವರಣ ಬದಲಾವಣೆಯಾಗುವುದರಿಂದ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ.
ಇದರಿಂದಾಗಿ ಕೆಲವೊಮ್ಮೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮಳೆಗಾಲದಲ್ಲಿ ನೀರಿನ ಬಗ್ಗೆ ಎಚ್ಚರಿಕೆ ವಹಿಸಬೇಕು.
ಶುದ್ಧ ನೀರು ಪೂರೈಕೆಯಾದರೂ ಕೆಲವೊಮ್ಮೆ ನೀರಿನ ಮೂಲಕ ರೋಗಾಣುಗಳು ಹರಡುವ ಸಾಧ್ಯತೆಗಳಿರುತ್ತವೆ. ರೋಗಾಣುಗಳು ಹರಡಿ ಕಾಯಿಲೆಗಳು ಬರುವ ಸಾಧ್ಯತೆ ಇರುವುದರಿಂದ ಶುದ್ಧ ನೀರನ್ನು ಕುಡಿಯಬೇಕು.
ನೇರವಾಗಿ ನಲ್ಲಿಯ ನೀರನ್ನು ಕುಡಿಯದೇ, ಚೆನ್ನಾಗಿ ಕುದಿಸಿ, ಆರಿಸಿದ ನೀರನ್ನು ಕುಡಿಯುವುದು ಉತ್ತಮ. ಮತ್ತೊಂದು ವಿಷಯವೇನೆಂದರೆ, ಮಳೆಗಾಲದಲ್ಲಿ ತಂಪನೆಯ ಪದಾರ್ಥಗಳನ್ನು ಸೇವಿಸಬಾರದು.
ಮಳೆಗಾಲದಲ್ಲಿ ಐಸ್ ಕ್ರೀಂ, ಕೂಲ್ ಡ್ರಿಂಕ್ಸ್, ಫ್ರಿಜ್ ನಲ್ಲಿಟ್ಟ ಆಹಾರ ಪದಾರ್ಥಗಳನ್ನು ಬಳಸಬಾರದು. ತಣ್ಣನೆಯ ಪದಾರ್ಥಗಳು ರುಚಿಸುವುದಿಲ್ಲ. ಅದು ಆರೋಗ್ಯಕ್ಕೂ ಒಳ್ಳೆಯದಲ್ಲ.
ಮಳೆಗಾಲದಲ್ಲಿ ನೀರು, ಆಹಾರ ಸೇವನೆಯಲ್ಲಿ ಎಚ್ಚರಿಕೆ ವಹಿಸುವುದು ಒಳಿತು. ಇಲ್ಲವಾದರೆ ಆರೋಗ್ಯ ಹದಗೆಡಬಹುದು.