ಮಾನಸಿಕ ಅಸ್ವಸ್ಥತೆಗೆ ವೈದ್ಯಕೀಯ ಚಿಕಿತ್ಸೆ ಪಡೆಯಲು ಪತ್ನಿ ನಿರಾಕರಿಸಿದ ನಂತರ ಮಾನಸಿಕ ಕ್ರೌರ್ಯದ ಆಧಾರದ ಮೇಲೆ ವಿಚ್ಛೇದನ ನೀಡಿದ್ದ ಕೇರಳ ಹೈಕೋರ್ಟ್‌ನ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಪ್ಯಾರನಾಯ್ಡ್ ಸ್ಕಿಜೋಫ್ರೇನಿಯಾದಿಂದ ಬಳಲುತ್ತಿರುವುದನ್ನು ಸ್ಪಷ್ಟವಾಗಿ ನಿರಾಕರಿಸಿದ ಪತ್ನಿ, ವಿಶೇಷ ರಜೆ ಅರ್ಜಿಯನ್ನು ಸಲ್ಲಿಸಿದ್ದಾಳೆ.
2001ರಲ್ಲಿ ಇವರು ಮದುವೆಯಾಗಿದ್ದು, ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮದುವೆಯಾದಾಗಿನಿಂದಲೂ ಆಕೆ ಹುಚ್ಚಿ ಎಂದು ಗಂಡ ಮತ್ತು ಅತ್ತೆ-ಮಾವ ಜರಿಯುತ್ತಿದ್ದರಂತೆ. 2009ರಲ್ಲಿ ಪತ್ನಿ ಮತ್ತವನ ಸ್ನೇಹಿತರು ಬಲವಂತವಾಗಿ ಅವಳನ್ನು ಹುಚ್ಚಾಸ್ಪತ್ರೆಗೆ ಸೇರಿಸಿದ್ದರು. ಅಲ್ಲಿ ಆಕೆಗೆ ಭಾರೀ ಪ್ರಮಾಣದಲ್ಲಿ ಔಷಧ ನೀಡಲಾಗಿದೆಯಂತೆ ಮತ್ತು ಪ್ಯಾರನಾಯ್ಡ್ ಸ್ಕಿಜೋಫ್ರೇನಿಯಾ ಇದೆಯೆಂದು ತಪ್ಪಾಗಿ ರೋಗನಿರ್ಣಯ ಮಾಡಲಾಗಿದೆ.
ಇದೆಲ್ಲದರಿಂದ ನೊಂದ ಮಹಿಳೆ 2011ರಲ್ಲಿ ಪತಿಯ ಮನೆಯನ್ನು ತೊರೆದಿದ್ದಳು. ಪತ್ನಿ ಮಾನಸಿಕ ಅಸ್ವಸ್ಥೆ, ತನ್ನನ್ನು ತೊರೆದು ಹೋಗಿದ್ದಾಳೆ ಹಾಗಾಗಿ ಕ್ರೌರ್ಯದ ಆಧಾರದ ಮೇಲೆ ವಿಚ್ಛೇದನ ಕೊಡಿ ಎಂದು ಆತ ಅರ್ಜಿ ಸಲ್ಲಿಸಿದ್ದ. ಕ್ರೌರ್ಯದ ಆಧಾರದ ಮೇಲೆ ಕೇರಳ ಹೈಕೋರ್ಟ್ ವಿಚ್ಛೇದನ ನೀಡಿತ್ತು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಪತ್ನಿ, ತಾನು ಪ್ಯಾರನಾಯ್ಡ್ ಸ್ಕಿಜೋಫ್ರೇನಿಯಾ ಅಥವಾ ಯಾವುದೇ ಇತರ ಮಾನಸಿಕ ಕಾಯಿಲೆಯಿಂದ ಬಳಲುತ್ತಿಲ್ಲ, ತೀರ್ಪು ಕಾನೂನುಬದ್ಧವಾಗಿ ಅಸಮರ್ಥನೀಯವಾಗಿದೆ. ಹಾಗಾಗಿ ಅದನ್ನು ರದ್ದುಪಡಿಸಿ ಎಂದು ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾಳೆ.