ಉತ್ತರ ಪ್ರದೇಶದಲ್ಲಿ ಮಾನವ ಕುಲವೇ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದೆ. ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಐವರು ಯುವಕರು ಬಳಿಕ ಆಕೆ ತನ್ನ ಮನೆಗೆ ಬೆತ್ತಲೆಯಾಗಿ ನಡೆದುಕೊಂಡು ಹೋಗುವಂತೆ ಮಾಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಇಬ್ಬರು ದಲಿತ ಯುವತಿಯರ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ ಘಟನೆ ಬೆನ್ನಲ್ಲೇ ಈ ಕೃತ್ಯ ನಡೆದಿದೆ. ಮೊರದಾಬಾದ್ ನಲ್ಲಿ ಸೆಪ್ಟೆಂಬರ್ 7ರಂದು ಈ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ವಿಡಿಯೋದಲ್ಲಿ ಕಾಣುವಂತೆ ಅಪ್ರಾಪ್ತ ಬಾಲಕಿ ಮೊರದಾಬಾದ್ ಬೀದಿಯಲ್ಲಿ ಬೆತ್ತಲೆಯಾಗಿ ನಡೆದುಕೊಂಡು ಬರುತ್ತಿದ್ದು, ದಾರಿಹೋಕರು ಹಾಗೂ ವಾಹನ ಸವಾರರು ಆಕೆಯ ನೆರವಿಗೆ ಧಾವಿಸದೆ ಹೋಗುತ್ತಿರುವುದು ಕಂಡು ಬಂದಿದೆ. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡ ಬೋಜ್ಪುರ್ ಠಾಣೆ ಪೊಲೀಸರು ಓರ್ವನನ್ನು ಬಂಧಿಸಿದ್ದು, ಪರಾರಿಯಾಗಿರುವ ನಾಲ್ವರ ಬಂಧನಕ್ಕೆ ತೀವ್ರ ಶೋಧ ಕಾರ್ಯ ನಡೆಸಿದ್ದಾರೆ.