ಬೆಳಿಗ್ಗಿನ ತಿಂಡಿಗೆ ಇಡ್ಲಿ, ದೋಸೆ, ರೈಸ್ ಬಾತ್ ಮಾಡುತ್ತಿರುತ್ತೇವೆ. ಇದನ್ನು ದಿನಾ ತಿಂದು ತಿಂದು ಬೇಜಾರು ಆಗಿರುತ್ತದೆ. ಒಮ್ಮೆ ಈ ರುಚಿಯಾದ ನುಚ್ಚಿನುಂಡೆಯನ್ನು ಮನೆಯಲ್ಲಿ ಮಾಡಿ ಸವಿಯಿರಿ. ತಿನ್ನುವುದಕ್ಕೂ ರುಚಿಕರವಾಗಿರುತ್ತದೆ. ಜತೆಗೆ ಆರೋಗ್ಯಕ್ಕೂ ಒಳ್ಳೆಯದು.
ಬೇಕಾಗುವ ಸಾಮಾಗ್ರಿಗಳು
½ ಕಪ್-ತೊಗರಿಬೇಳೆ, ½ ಕಪ್ ಕಡಲೆಬೇಳೆ, ½ ಕಪ್ –ತೆಂಗಿನಕಾಯಿ ತುರಿ, 2 ಟೇಬಲ್ ಸ್ಪೂನ್-ಕೊತ್ತಂಬರಿ ಸೊಪ್ಪು, ಸ್ವಲ್ಪ ಕರಿಬೇವು, 1 ಇಂಚು ಶುಂಠಿ ಸಣ್ಣಗೆ ಹಚ್ಚಿಟ್ಟುಕೊಂಡಿದ್ದು, 2-ಹಸಿಮೆಣಸು, 1 ಟೀ ಸ್ಪೂನ್-ಜೀರಿಗೆ. ಚಿಟಿಕೆ ಇಂಗು, ಉಪ್ಪು ರುಚಿಗೆ ತಕ್ಕಷ್ಟು.
ಮೊದಲಿಗೆ ಕಡಲೇಬೇಳೆ, ತೊಗರಿಬೇಳೆಯನ್ನು ಚೆನ್ನಾಗಿ ತೊಳೆದು 4 ಗಂಟೆ ಹೊತ್ತು ನೆನೆಸಿಡಿ. ನಂತರ ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ನೀರು ಸೇರಿಸದೆ ತರಿ ತರಿಯಾಗಿ ರುಬ್ಬಿಕೊಳ್ಳಿ. ಇದನ್ನು ಒಂದು ದೊಡ್ಡ ಬೌಲ್ ಗೆ ಹಾಕಿಕೊಂಡು ಅದಕ್ಕೆ ತೆಂಗಿನಕಾಯಿ ತುರಿ, ಕೊತ್ತಂಬರಿಸೊಪ್ಪು, ಕರಿಬೇವು, ಕಾಯಿತುರಿ,ಶುಂಠಿ, ಇಂಗು, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಇದನ್ನು ಉಂಡೆ ತರಹ ಕಟ್ಟಿಕೊಂಡು ಹಬೆಯಲ್ಲಿ ಬೇಯಿಸಿಕೊಳ್ಳಿ. ತುಪ್ಪ ಅಥವಾ ಚಟ್ನಿ ಜತೆ ಸವಿಯಲು ರುಚಿಯಾಗಿರುತ್ತದೆ.