ಗುರುವಾರದಂದು ಲೋಕಾಯುಕ್ತ ಪೊಲೀಸರು ಚನ್ನಗಿರಿ ಕ್ಷೇತ್ರದ ಶಾಸಕ ಹಾಗೂ KSDL ಅಧ್ಯಕ್ಷ ಮಾಡಾಳು ವಿರೂಪಾಕ್ಷಪ್ಪನವರ ಪುತ್ರ ಪ್ರಶಾಂತ್ ಅವರ ಕಚೇರಿ ಹಾಗೂ ನಿವಾಸಗಳ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಕೋಟ್ಯಾಂತರ ರೂಪಾಯಿ ನಗದು ಪತ್ತೆಯಾಗಿದೆ.
ಈ ಕುರಿತಂತೆ ಇಂದು ಪತ್ರಿಕಾಗೋಷ್ಠಿ ನಡೆಸಿದ ಲೋಕಾಯುಕ್ತ ಮುಖ್ಯ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್, ಪ್ರಶಾಂತ್ ಅವರ ಕಚೇರಿಯಲ್ಲಿ 2 ಕೋಟಿ 2 ಲಕ್ಷ ರೂಪಾಯಿ ಹಾಗೂ ನಿವಾಸದಲ್ಲಿ 6.10 ಕೋಟಿ ರೂಪಾಯಿ ಸೇರಿದಂತೆ ಒಟ್ಟು 8.12 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ ಎಂದು ಹೇಳಿದ್ದಾರೆ.
ಟೆಂಡರ್ ಕೊಡಿಸುವ ಸಲುವಾಗಿ ಇವರುಗಳು ಲಂಚ ಪಡೆಯುತ್ತಿದ್ದ ವೇಳೆ ದಾಳಿ ನಡೆಸಲಾಗಿತ್ತು. ಪ್ರಶಾಂತ್, ಅಕೌಂಟೆಂಟ್ ಹಾಗೂ ಲಂಚ ನೀಡಲು ಬಂದಿದ್ದ ಮೂವರು ಸೇರಿದಂತೆ ಒಟ್ಟು ಐದು ಮಂದಿಯನ್ನು ಬಂಧಿಸಲಾಗಿದೆ ಎಂದು ಲೋಕಾಯುಕ್ತರು ತಿಳಿಸಿದ್ದಾರೆ.
ಇನ್ನು ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರಿಗೆ ನೋಟಿಸ್ ನೀಡುವ ಕುರಿತಂತೆ ಪ್ರತಿಕ್ರಿಯಿಸಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್, ಈ ವಿಚಾರ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಬಿಟ್ಟದ್ದು ಎಂದು ತಿಳಿಸಿದ್ದಾರೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.