
ಮಹೀಂದ್ರಾ ಕಂಪನಿಯ ಮುಖ್ಯ ಉದ್ದೇಶವು ನಮ್ಮ ಸಮುದಾಯ ಹಾಗೂ ಎಲ್ಲಾ ಪಾಲುದಾರರಿಗೆ ಶಕ್ತಿ ತುಂಬುವುದಾಗಿದೆ. ಒಬ್ಬ ವ್ಯಕ್ತಿಯ ಘನತೆಯನ್ನು ಎತ್ತಿ ಹಿಡಿಯುವುದು ಕಂಪನಿಯ ಮೊದಲ ಆದ್ಯತೆಯಾಗಿದೆ. ಈ ವಿಚಾರದಲ್ಲಿ ಕಂಪನಿಯು ಯಾವುದೇ ರೀತಿಯಲ್ಲಿ ರಾಜಿಯಾಗುವಂತಹ ಅಥವಾ ನಮ್ಮ ತತ್ವದ ವಿರುದ್ಧ ನಡೆದುಕೊಳ್ಳುವುದು ಯಾವುದೇ ಘಟನೆಗಳನ್ನು ಸಹಿಸುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಇದೇ ಘಟನೆಯ ವಿಚಾರವಾಗಿ ಟ್ವೀಟ್ ಮಾಡಿರುವ ಮಹೀಂದ್ರಾ ಕಂಪನಿಯ ಸಿಇಓ ವಿಜಯ್ ನಕ್ರಾ, ಗ್ರಾಹಕರಿಗೆ ಉತ್ತಮ ಅನುಭವ ನೀಡಬೇಕು ಎಂಬುದು ನಮ್ಮ ಪ್ರಯತ್ನವಾಗಿದೆ. ಈ ಪ್ರಯತ್ನದಲ್ಲಿ ಡೀಲರ್ಗಳು ಪ್ರಮುಖ ಪಾತ್ರ ವಹಿಸುತ್ತಾರೆ. ನಮ್ಮ ಎಲ್ಲಾ ಗ್ರಾಹಕರನ್ನು ಗೌರವದಿಂದ ಕಾಣಬೇಕು ಎಂಬುದು ನಮ್ಮ ಕಂಪನಿಯ ಧ್ಯೇಯವಾಗಿದೆ. ಆದರೆ ನಮ್ಮ ಕಂಪನಿಯ ಡೀಲರ್ ಗ್ರಾಹಕರಿಗೆ ಗೌರವ ನೀಡುವ ವಿಚಾರದಲ್ಲಿ ಎಡವಿರುವುದು ಸಾಬೀತಾದಲ್ಲಿ ಅವರನ್ನು ಕೌನ್ಸೆಲಿಂಗ್ಗೆ ಒಳಪಡಿಸುವುದರ ಜೊತೆಯಲ್ಲಿ ಆ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬರೆದುಕೊಂಡಿದ್ದಾರೆ.
ಶುಕ್ರವಾರದಂದು ತುಮಕೂರಿನ ರಾಮನಪಾಳ್ಯ ಎಂಬಲ್ಲಿ ಗೂಡ್ಸ್ ವಾಹನ ಖರೀದಿಗೆಂದು ಬಂದಿದ್ದ ರೈತ ಕೆಂಪೇಗೌಡ ಎಂಬವರಿಗೆ ಮಹೀಂದ್ರಾ ಶೋರೂಂನಲ್ಲಿ ಅವಮಾನ ಮಾಡಲಾಗಿತ್ತು. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು.