ತನ್ನ ಮಗಳ ಆಕ್ಷೇಪಾರ್ಹ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಪ್ರಸಾರ ಮಾಡುತ್ತಿರುವ ಬಗ್ಗೆ ದೂರು ನೀಡಿದ 46 ವರ್ಷದ ಬಿಎಸ್‌ಎಫ್ ಯೋಧನನ್ನು ಹೊಡೆದು ಸಾಯಿಸಿರೋ ಆಘಾತಕಾರಿ ಘಟನೆ ನಡೆದಿದೆ.
ಗುಜರಾತ್‌ನ ನಾಡಿಯಾಡ್‌ನ ಚಕ್ಲಾಸಿಯಲ್ಲಿ 15 ವರ್ಷದ ಬಾಲಕನ ಕುಟುಂಬದ ಏಳು ಸದಸ್ಯರು ಯೋಧನನ್ನು ಹೊಡೆದು ಸಾಯಿಸಿದ್ದಾರೆ. ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಬಿಎಸ್‌ಎಫ್ ಯೋಧ , ಅವರ ಪತ್ನಿ ಮತ್ತು ಅವರ ಇಬ್ಬರು ಪುತ್ರರು ಸೇರಿದಂತೆ ಅವರ ಸೋದರಳಿಯ ಆರೋಪಿ ಬಾಲಕನ ಕುಟುಂಬವಿದ್ದ ಸ್ಥಳಕ್ಕೆ ವಿಷಯದ ಬಗ್ಗೆ ಮಾತನಾಡಲು ಹೋದಾಗ ಘಟನೆ ನಡೆದಿದೆ.
ಎಫ್‌ಐಆರ್ ಪ್ರಕಾರ, ಯೋಧನ 15 ವರ್ಷದ ಮಗಳ ಆಕ್ಷೇಪಾರ್ಹ ವೀಡಿಯೊ ಇತ್ತೀಚೆಗೆ ವೈರಲ್ ಆಗಿತ್ತು. ವೀಡಿಯೊದಲ್ಲಿ, ಚಕ್ಲಾಸಿ ಗ್ರಾಮದ 15 ವರ್ಷದ ಬಾಲಕ ಕೂಡ ಕಾಣಿಸಿಕೊಂಡಿದ್ದಾನೆ. ಸಂತ್ರಸ್ತೆಯ ಕುಟುಂಬದ ಪ್ರಕಾರ, ಅದೇ ಹುಡುಗನೇ ವೀಡಿಯೊವನ್ನು ಪ್ರಸಾರ ಮಾಡಿದ್ದಾನೆ ಎಂಬ ಆರೋಪವಿದೆ. ಇದರ ಬಗ್ಗೆ ಮಾತನಾಡಲು ಯೋಧನ ಕುಟುಂಬ ಬಾಲಕನ ಕುಟುಂಬದೊಂದಿಗೆ ಮಾತನಾಡಲು ತೆರಳಿತ್ತು.
ಶನಿವಾರ ರಾತ್ರಿ, ಬಿಎಸ್‌ಎಫ್ ಯೋಧ ಮತ್ತು ಅವರ ಕುಟುಂಬ ಸದಸ್ಯರು ಹುಡುಗನ ಮನೆಗೆ ಹೋಗಿದ್ದರು. ಹುಡುಗನ ತಂದೆ ಮತ್ತು ಇಬ್ಬರು ಮಹಿಳೆಯರು ಸೇರಿದಂತೆ ಕುಟುಂಬದ ಆರು ಸದಸ್ಯರು ಯೋಧ ಮತ್ತು ಅವನ ಕುಟುಂಬ ಸದಸ್ಯರನ್ನು ನಿಂದಿಸಲು ಪ್ರಾರಂಭಿಸಿದರು. ನಂತರ ಆ ಏಳು ಸದಸ್ಯರು ಯೋಧ ಸೇರಿದಂತೆ ಯೋಧನ ಕುಟುಂಬದ ಮೇಲೆ ಹಲ್ಲೆ ನಡೆಸಿದರು ಎಂದು ಯೋಧನ ಪತ್ನಿ ದಾಖಲಿಸಿದ ಎಫ್‌ಐಆರ್ ನಲ್ಲಿ ತಿಳಿಸಲಾಗಿದೆ.