ನವದೆಹಲಿ: ಅಮೆರಿಕದ ಮಹಿಳೆಯೊಬ್ಬರ ಕಣ್ಣಿನಿಂದ ಮೂರು ಜೀವಂತ ಜೇನುನೊಣಗಳನ್ನು ದೆಹಲಿ ವೈದ್ಯರು ಹೊರತೆಗೆದಿದ್ದಾರೆ.
ಇತ್ತೀಚೆಗಷ್ಟೇ ಅಮೆಜಾನ್ ಅರಣ್ಯಕ್ಕೆ ಭೇಟಿ ನೀಡಿದ್ದ 32 ವರ್ಷದ ಮಹಿಳೆಯ ಕಣ್ಣಿನಲ್ಲಿ ಅಪರೂಪದ ಮಯಾಸಿಸ್ ಎಂಬ ಅಂಗಾಂಶ ಸೋಂಕು ಕಾಣಿಸಿಕೊಂಡಿದ್ದು, ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಶಸ್ತ್ರಚಿಕಿತ್ಸೆ ವೇಳೆ 2 ಸೆಂ.ಮೀ ಗಾತ್ರದ ಮೂರು ಜೀವಂತ ಜೇನು ನೊಣಗಳನ್ನು ತೆಗೆದು ಹಾಕಲಾಯಿತು.
ಮೈಯಾಸಿಸ್ ಎನ್ನುವುದು ಮಾನವನ ಅಂಗಾಂಶದಲ್ಲಿನ ಫ್ಲೈ ಲಾರ್ವಾ (ಮ್ಯಾಗ್ಗೊಟ್) ಸೋಂಕಾಗಿದೆ. ಇದು ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ಸಂಭವಿಸುತ್ತದೆ. ಕೆಂಪು ಮತ್ತು ಮೃದುತ್ವದ ಜೊತೆಗೆ ಬಲ ಮೇಲ್ಭಾಗದ ಕಣ್ಣುರೆಪ್ಪೆಯಲ್ಲಿ ಊತ ಕಾಣಿಸಿಕೊಂಡಿದ್ದರಿಂದ ರೋಗಿಯು ಆಸ್ಪತ್ರೆಯ ತುರ್ತು ವಿಭಾಗಕ್ಕೆ ದೌಡಾಯಿಸಿದ್ದಾರೆ.
ಕಳೆದ 4-6 ವಾರಗಳಿಂದ ತನ್ನ ಕಣ್ಣುರೆಪ್ಪೆಗಳೊಳಗೆ ಏನೋ ಚಲಿಸುತ್ತಿರುವುದಾಗಿ ಆಕೆ ವೈದ್ಯರ ಬಳಿ ತಿಳಿಸಿದ್ದಾಳೆ. ಆಕೆ ಅಮೆರಿಕಾದಲ್ಲಿ ವೈದ್ಯರನ್ನು ಸಂಪರ್ಕಿಸಿದ್ದರು. ಆದರೆ, ಜೇನುನೊಣವನ್ನು ಅವರಿಗೆ ತೆಗೆದುಹಾಕಲು ಸಾಧ್ಯವಾಗಲಿಲ್ಲ. ಹೀಗಾಗಿ ದೆಹಲಿಯಲ್ಲಿ ಅವರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ.
ಇದು ಅತ್ಯಂತ ಅಪರೂಪದ ಪ್ರಕರಣವಾಗಿರೋದ್ರಿಂದ, ಇದನ್ನು ತುರ್ತಾಗಿ ವಿವರವಾಗಿ ಮೌಲ್ಯಮಾಪನ ಮಾಡಬೇಕಾಗುತ್ತದೆ. ಚರ್ಮದೊಳಗಿನ ಚಲನೆಯನ್ನು ಗಮನಿಸಿ, ರೋಗನಿರ್ಣಯ ಮಾಡಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ.
ಸುಮಾರು 2 ಸೆಂ.ಮೀ ಗಾತ್ರದ ಮೂರು ಜೀವಂತ ಜೇನು ನೊಣಗಳನ್ನು ತೆಗೆದುಹಾಕುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಒಂದು ಬಲ ಮೇಲಿನ ಕಣ್ಣುರೆಪ್ಪೆಯಿಂದ, ಎರಡನೆಯದು ಅವಳ ಕತ್ತಿನ ಹಿಂಭಾಗದಿಂದ ಮತ್ತು ಮೂರನೆಯದು ಅವಳ ಬಲ ಮುಂದೋಳಿನಿಂದ ತೆಗೆದು ಹಾಕಲಾಗಿದೆ. ಯಾವುದೇ ಅರಿವಳಿಕೆ ಇಲ್ಲದೆ ಎಲ್ಲಾ ಮುನ್ನೆಚ್ಚರಿಕೆಗಳೊಂದಿಗೆ 10 ರಿಂದ 15 ನಿಮಿಷಗಳಲ್ಲಿ ಶಸ್ತ್ರಚಿಕಿತ್ಸೆಯನ್ನು ಪೂರ್ಣಗೊಳಿಸಲಾಯಿತು.