
ತಂತ್ರಜ್ಞಾನ ಮುಂದುವರಿದಂತೆ ಅದರ ದುರ್ಬಳಕೆಗಳು ಸಹ ಹೆಚ್ಚುತ್ತವೆ. ಕೆಲವು ಕಿಡಿಗೇಡಿಗಳು ಯುವತಿಯರ ಅಶ್ಲೀಲ ಫೋಟೋ ತೆಗೆದು ಬ್ಲಾಕ್ ಮೇಲ್ ಮಾಡುತ್ತಾರೆ. ಯುವತಿಯರಿಗೆ ಗೊತ್ತಾಗದಂತೆ ಫೋಟೋ ತೆಗೆದು ತಮ್ಮ ಕಿಡಿಗೇಡಿತನ ತೋರುತ್ತಾರೆ. ಯುವತಿಯರು ಸ್ಕರ್ಟ್ ಧರಿಸಿದ್ದರೆ (ಅಪ್‌ಸ್ಕರ್ಟಿಂಗ್), ಅವರಿಗೆ ತಿಳಿಯದಂತೆ ಅದರ ಕೆಳಗೆ ಮೊಬೈಲ್ ಇರಿಸಿ ಫೋಟೋ ತೆಗೆದುಕೊಳ್ಳುತ್ತಾರೆ. ಇದೀಗ ಇಂಥ ದುಷ್ಕೃತ್ಯಗಳನ್ನು, ಅಶ್ಲೀಲ ಫೋಟೋಗಳು ಮತ್ತು ವಿಡಿಯೋಗಳನ್ನು ತೆಗೆಯುವುದರ ವಿರುದ್ಧ ಜಪಾನ್ ದೇಶ ನಿಷೇಧಕ್ಕೆ ಮುಂದಾಗಿದೆ.
ಗುಟ್ಟಾಗಿ ಛಾಯಾಚಿತ್ರಗಳನ್ನು ತೆಗೆಯುವ ಜನರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ದೇಶದ ರಾಷ್ಟ್ರೀಯ ಶಾಸಕಾಂಗವಾದ ಜಪಾನೀಸ್ ಡಯಟ್‌ನಲ್ಲಿ ಮಸೂದೆಯನ್ನು ಸಲ್ಲಿಸಲಾಗಿದೆ. ಲೈಂಗಿಕ ಅಪರಾಧಗಳ ಕುರಿತು ಜಪಾನ್ ಕಾನೂನುಗಳ ಕೂಲಂಕುಷ ಪರೀಕ್ಷೆಯ ಭಾಗವಾಗಿರುವ ಸುಧಾರಣೆಗಳನ್ನು ಜೂನ್‌ನಲ್ಲಿ ಅಂಗೀಕರಿಸಲಾಗುವುದು. ಒಪ್ಪಿಗೆಯಿಲ್ಲದೆ ಯಾರೊಬ್ಬರ ಖಾಸಗಿ ಅಂಗಗಳ ಛಾಯಾಚಿತ್ರಗಳನ್ನು ತೆಗೆಯುವುದು, ವಿತರಿಸುವುದು ಮತ್ತು ಹೊಂದುವುದು ನಿಷೇಧ.
ಇಂಥ ದುಷ್ಕೃತ್ಯ ಎಸಗಿದರೆ, ಅಪರಾಧಿಗಳು ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 3 ಮಿಲಿಯನ್ ಜಪಾನೀಸ್ ಯೆನ್ ವರೆಗೆ ದಂಡವನ್ನು ಎದುರಿಸಬೇಕಾಗುತ್ತದೆ. ಅಪ್‌ಸ್ಕರ್ಟಿಂಗ್ ಎನ್ನುವುದು ಯಾರೊಬ್ಬರ ಅನುಮತಿಯಿಲ್ಲದೆ ಅವರ ಉಡುಪಿನ ಕೆಳಗಿನಿಂದ ಅವರಿಗೆ ಗೊತ್ತಾಗದಂತೆ ಫೋಟೋ ಅಥವಾ ವಿಡಿಯೋ ಮಾಡುವುದಾಗಿದೆ. ಹೀಗಾಗಿ ಇನ್ಮುಂದೆ ಇಂಥವರ ವಿರುದ್ಧ ಕಠಿಣ ಕ್ರಮಕ್ಕೆ ಜಪಾನ್ ಮುಂದಾಗಿದೆ.
ಇಂತಹ ಅಪರಾಧವು ಸಾಮಾನ್ಯವಾಗಿ ಜನಸಂದಣಿಯ ನಡುವೆ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುತ್ತದೆ. ಇಂಥ ದುಷ್ಕೃತ್ಯ ಎಸಗುವ ಕಿಡಿಗೇಡಿಗಳು, ತಮ್ಮ ಬೂಟುಗಳ ಮೇಲೆ ಕ್ಯಾಮರಾಗಳನ್ನು ಇರಿಸಿ ಫೋಟೋ ಕ್ಲಿಕ್ಕಿಸುತ್ತಾರೆ. ಅಲ್ಲದೆ, ಹೋಟೆಲ್ ಬೆಡ್ ರೂಮ್, ಡ್ರೆಸ್ಸಿಂಗ್ ರೂಮ್, ಸಾರ್ವಜನಿಕ ಶೌಚಾಲಯ ಮುಂತಾದ ಕಡೆಗಳಲ್ಲಿ ಕೆಲವರು ಕ್ಯಾಮರಾ ಇರಿಸುತ್ತಾರೆ. ಹೀಗಾಗಿ ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಜಪಾನ್ ದೇಶ ನಿರ್ಧರಿಸಿದೆ.