ಪುರುಷರು ಮತ್ತು ಮಹಿಳೆಯರ ದೇಹವು ಅನೇಕ ವಿಷಯಗಳಲ್ಲಿ ವಿಭಿನ್ನವಾಗಿರುತ್ತದೆ. ಹಾಗಾಗಿ ಅವರ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಸಹ ವಿಭಿನ್ನವಾಗಿರಬಹುದು. ಕಾಯಿಲೆಗಳ ಬಗ್ಗೆ ಪುರುಷರು ಇನ್ನಷ್ಟು ಜಾಗರೂಕರಾಗಿರಬೇಕು. ಯಾಕಂದ್ರೆ ಮಹಿಳೆಯರಿಗಿಂತ ಪುರುಷರನ್ನು ಹೆಚ್ಚು ಬಾಧಿಸುವ ಕೆಲವು ರೋಗಗಳಿವೆ. ಅವು ಯಾವುವು ಅನ್ನೋದನ್ನು ನೋಡೋಣ.
ಖಿನ್ನತೆ: ಸಾಮಾನ್ಯವಾಗಿ ಮಹಿಳೆಯರು ಹೆಚ್ಚು ಭಾವನಾತ್ಮಕವಾಗಿರುತ್ತಾರೆ ಎಂದುಕೊಳ್ಳುತ್ತೇವೆ. ಆದರೆ ಖಿನ್ನತೆಯ ಸಮಸ್ಯೆ ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದಕ್ಕೆ ಕಾರಣವೆಂದರೆ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಹೆಚ್ಚು ವ್ಯಕ್ತಪಡಿಸುತ್ತಾರೆ, ಆದರೆ ಪುರುಷರು ತಮ್ಮ ಭಾವನೆಗಳನ್ನು ಮರೆಮಾಚುತ್ತಾರೆ. ಇದರಿಂದಾಗಿ ಒಳಗೊಳಗೆ ಉಸಿರುಗಟ್ಟಿದಂತಾಗಿರುತ್ತದೆ. ನೀವು ಅಸಮಾಧಾನಗೊಂಡಾಗ ನಿಮ್ಮ ಆಪ್ತರೊಂದಿಗೆ ವಿಷಯವನ್ನು ಹಂಚಿಕೊಳ್ಳುವುದು ಉತ್ತಮ. ಅದು ಉದ್ವೇಗ ಮತ್ತು ಒತ್ತಡವನ್ನು ನಿವಾರಿಸುತ್ತದೆ.
ಹೃದ್ರೋಗ: ಹೆಚ್ಚಿನ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವು ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಾಗಿರುತ್ತದೆ. ಏಕೆಂದರೆ ಪುರುಷರು ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟದಿಂದ ತೊಂದರೆಗೊಳಗಾಗುತ್ತಾರೆ. ಕಾಲಕಾಲಕ್ಕೆ ನಿಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಮುಖ್ಯ.
ಮಧುಮೇಹ: ಮಹಿಳೆಯರಿಗೆ ಹೋಲಿಸಿದರೆ ಪುರುಷರು ಹೆಚ್ಹೆಚ್ಚು ಕರಿದ ಪದಾರ್ಥಗಳನ್ನು ತಿನ್ನುತ್ತಾರೆ. ಇದರಿಂದಾಗಿ ಅವರ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗುತ್ತದೆ. ಇದು ನಂತರ ಮಧುಮೇಹಕ್ಕೆ ಕಾರಣವಾಗುತ್ತದೆ. ಅದಕ್ಕಾಗಿಯೇ ಆರೋಗ್ಯಕರ ಆಹಾರವನ್ನು ಮಾತ್ರ ಸೇವಿಸಬೇಕು. ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಪರಿಶೀಲಿಸಿಲಿಕೊಳ್ಳಬೇಕು.
ಯಕೃತ್ತಿನ ಕಾಯಿಲೆ: ಮದ್ಯಪಾನ ಮಾಡುವವರ ಸಂಖ್ಯೆ ಕೂಡ ಮಹಿಳೆಯರಿಗಿಂತ ಪುರುಷರಲ್ಲೇ ಹೆಚ್ಚು. ಇದರಿಂದ ಅವರ ಯಕೃತ್ತು ಸಾಕಷ್ಟು ಹಾನಿಗೊಳಗಾಗಿರುತ್ತದೆ. ಪರಿಣಾಮ ಯಕೃತ್ತಿಗೆ ಸಂಬಂಧಪಟ್ಟ ಸಮಸ್ಯೆಗಳು ಕಾಣಿಸಿಕೊಳ್ಳುವ ಅಪಾಯವಿರುತ್ತದೆ.
ಶ್ವಾಸಕೋಶದ ಕಾಯಿಲೆ: ಸಾಮಾನ್ಯವಾಗಿ ಮಹಿಳೆಯರಿಗಿಂತ ಪುರುಷರು ಹೆಚ್ಚು ಧೂಮಪಾನ ಮಾಡುತ್ತಾರೆ. ಪ್ರತಿದಿನ ಕೆಲಸಕ್ಕಾಗಿ ಮನೆಯಿಂದ ಹೊರಗೆ ಹೋಗುವುದರಿಂದ ಧೂಳು ಮತ್ತು ಮಾಲಿನ್ಯಕ್ಕೆ ತುತ್ತಾಗುತ್ತಾರೆ. ಈ ಎಲ್ಲ ಕಾರಣಗಳಿಂದ ಪುರುಷರಿಗೆ ಹೆಚ್ಚಾಗಿ ಶ್ವಾಸಕೋಶದ ಕಾಯಿಲೆಗಳು ಬರುತ್ತವೆ.