ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ಯೋಗಾಸನದ ಪ್ರಯೋಜನಗಳು ಸಾಕಷ್ಟಿವೆ. ಆದರೆ ಇದು ಮಹಿಳೆಯರ ಸಂತಾನೋತ್ಪತ್ತಿ ಸಾಮರ್ಥ್ಯದೊಂದಿಗೆ ಕೂಡ ಸಂಬಂಧ ಹೊಂದಿದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ.
ಯೋಗವು ಮಹಿಳೆಯರಲ್ಲಿ ಫಲವತ್ತತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಯೋಗಾಸನವನ್ನು ನಿಯಮಿತವಾಗಿ ಅಳವಡಿಸಿಕೊಂಡರೆ ಮಹಿಳೆಯರಿಗೆ ಗರ್ಭ ಧರಿಸಲು ಸುಲಭವಾಗುತ್ತದೆ. ತಜ್ಞರ ಪ್ರಕಾರ ಯೋಗಾಸನಗಳು ನಿರ್ದಿಷ್ಟವಾಗಿ ನಮ್ಮ ಸ್ಯಾಕ್ರಲ್ ಚಕ್ರ ಪ್ರದೇಶದ ಮೇಲೆ ಕೇಂದ್ರೀಕರಿಸುತ್ತವೆ.
ಇದು ಫಲವತ್ತತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಯೋಗ ಮತ್ತು ಫಲವತ್ತತೆಗೆ ನೇರ ಸಂಬಂಧವಿಲ್ಲ ಎಂದು ತಜ್ಞರು ಹೇಳುತ್ತಾರೆ. ಆದಾಗ್ಯೂ, ಕೆಲವು ಅಧ್ಯಯನಗಳ ಪ್ರಕಾರ ಗರ್ಭಿಣಿಯಾಗಲು ಪ್ರಯತ್ನಿಸುತ್ತಿರುವವರಿಗೆ ಇದು ಪ್ರಯೋಜನಕಾರಿಯಾಗಿದೆ. ಗರ್ಭ ಧರಿಸಲು ಪ್ರಯತ್ನಿಸುತ್ತಿರುವವರು ತಪ್ಪದೇ ಯೋಗಾಭ್ಯಾಸ ಮಾಡಬೇಕು. ಒತ್ತಡವು ಮಹಿಳೆಯರ ಆರೋಗ್ಯಕ್ಕೆ ಮತ್ತು ವಿಶೇಷವಾಗಿ ಫಲವತ್ತತೆಗೆ ಹಾನಿಕಾರಕವಾಗಿದೆ. ಇದು ಅವರ ಗರ್ಭ ಧರಿಸುವ ಸಾಮರ್ಥ್ಯಕ್ಕೆ ಅಡ್ಡಿಯಾಗಬಹುದು.
ಯೋಗವು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ಗರ್ಭಿಣಿಯಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಅಂಡೋತ್ಪತ್ತಿ ಹಂತದಲ್ಲಿ ಅತೀವ ಒತ್ತಡಕ್ಕೆ ಒಳಗಾಗಿದ್ದರೆ ಮಹಿಳೆಯರು ಗರ್ಭಧರಿಸುವ ಸಾಧ್ಯತೆ ಕಡಿಮೆ. ಹಾಗಾಗಿ ಒತ್ತಡ ನಿವಾರಣೆಗೆ ಯೋಗ ಮತ್ತು ಪ್ರಾಣಾಯಾಮಗಳನ್ನು ಮಾಡುವ ಮೂಲಕ ಗರ್ಭ ಧರಿಸುವ ಸಾಧ್ಯತೆಗಳನ್ನು ಹೆಚ್ಚಿಸಿಕೊಳ್ಳಬಹುದು. ಒತ್ತಡವು ದೇಹದಲ್ಲಿ ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚಿನ ಮಟ್ಟದ ಕಾರ್ಟಿಸೋಲ್ ಹೊಂದಿರುವ ಮಹಿಳೆಯರು ಗರ್ಭಪಾತದ ಅಪಾಯವನ್ನು ಹೊಂದಿರುತ್ತಾರೆ.
ಹಾಗಾಗಿ ನೇರ ಸಂಬಂಧವಿಲ್ಲದೇ ಇದ್ದರೂ ಯೋಗಾಸನ ಫಲವತ್ತತೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಪರಿಹರಿಸುತ್ತದೆ. ಯೋಗಾಸನ ಒತ್ತಡ, ಖಿನ್ನತೆ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಹಾರ್ಮೋನುಗಳನ್ನು ಸಮತೋಲನಗೊಳಿಸುತ್ತದೆ. ವೀರ್ಯ ಉತ್ಪಾದನೆಯನ್ನು ಬೆಂಬಲಿಸುತ್ತದೆ. ಮಗುವನ್ನು ಹೊಂದಲು IVF ಅಥವಾ ಇತರ ಸಂತಾನೋತ್ಪತ್ತಿ ತಂತ್ರಜ್ಞಾನದ ಯಶಸ್ಸಿನ ಪ್ರಮಾಣವನ್ನು ಹೆಚ್ಚಿಸುತ್ತದೆ.