ಕೂದಲು ಉದುರುವಿಕೆಯ ಸಮಸ್ಯೆಯಿಂದ ಮಹಿಳೆಯರು ಮತ್ತು ಪುರುಷರು ಇಬ್ಬರೂ ಸಮಾನವಾಗಿ ತೊಂದರೆಗೊಳಗಾಗುತ್ತಾರೆ. ಕೂದಲು ಉದುರುವಿಕೆ ಪ್ರತಿಯೊಬ್ಬ ವ್ಯಕ್ತಿಯ ದೇಹ, ಆರೋಗ್ಯ ಮತ್ತು ಜೀನ್‌ಗಳಿಗೆ ಸಂಬಂಧಿಸಿದೆ. ಇದಲ್ಲದೆ ಇನ್ನೂ ಅನೇಕ ನಿರ್ದಿಷ್ಟವಾದ ಕಾರಣಗಳಿಂದ ಕೂದಲು ಉದುರಲಾರಂಭಿಸುತ್ತದೆ. ಇದು ಅವರ ಕೂದಲಿನ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಮಹಿಳೆಯರಲ್ಲಿ ಕಂಡು ಬರುವ ಅಂತಹ ಒಂದು ಕಾಯಿಲೆಯ ಬಗ್ಗೆ ತಿಳಿದುಕೊಳ್ಳುವುದು ಬಹಳ ಅವಶ್ಯಕ.
ಮಹಿಳೆಯರಲ್ಲಿ ವೇಗವಾಗಿ ಕೂದಲು ಉದುರುವುದೇಕೆ?
ಇತ್ತೀಚಿನ ದಿನಗಳಲ್ಲಿ ಯುವತಿಯರಿಂದ ಹಿಡಿದು ವಯಸ್ಸಾದ ಮಹಿಳೆಯರಿಗೂ ಪಿಸಿಓಎಸ್ ಅಥವಾ ಪಿಸಿಓಡಿ ಸಮಸ್ಯೆಗಳು ಕಾಡುತ್ತಿವೆ. ಪಾಲಿಸಿಸ್ಟಿಕ್ ಓವರಿ ಡಿಸೀಸ್‌ನಂತಹ ಗಂಭೀರ ಕಾಯಿಲೆಗಳಿಗೆ ಮಹಿಳೆಯರು ಬಲಿಯಾಗುತ್ತಿದ್ದಾರೆ.ಕೆಲವು ದಶಕಗಳ ಹಿಂದೆ ಈ ರೋಗವು ಮಹಿಳೆಯರನ್ನು ಹೆಚ್ಚಾಗಿ ಕಾಡುತ್ತಿರಲಿಲ್ಲ. ಆದರೆ ಈಗಿನ ದಿನಚರಿ, ಆಹಾರ ಪದ್ಧತಿ, ದೈಹಿಕ ಚಟುವಟಿಕೆಗಳ ಕೊರತೆ ಮತ್ತು ಹೆಚ್ಚಿನ ಒತ್ತಡದಿಂದಾಗಿ ಪಿಸಿಓಎಸ್ ಮತ್ತು ಪಿಸಿಓಡಿ ಸಮಸ್ಯೆ 19-20 ವರ್ಷ ವಯಸ್ಸಿನ ಹುಡುಗಿಯರು ಮತ್ತು ಮಹಿಳೆಯರನ್ನು ಕಾಡುತ್ತಿದೆ.
ಈ ಕಾಯಿಲೆಯಿಂದ ಮಹಿಳೆಯರು ಮುಖ್ಯವಾಗಿ ಮುಟ್ಟು ಮತ್ತು ಗರ್ಭಧಾರಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದಲ್ಲದೆ ಇನ್ನೂ ಅನೇಖ ಆರೋಗ್ಯ ಸಮಸ್ಯೆಗಳು ಮಹಿಳೆಯರನ್ನು ಸುತ್ತುವರಿದಿವೆ.ಕೂದಲು ತೆಳುವಾಗುವುದು, ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗುವುದು ಮತ್ತು ವಿಪರೀತ ಕೂದಲು ಉದುರುವುದು ಈ ಎಲ್ಲಾ ಸಮಸ್ಯೆಗಳು ಪಿಸಿಓಡಿ ಅಥವಾ ಪಿಸಿಓಎಸ್‌ನಿಂದ ಗಂಭೀರ ಸ್ವರೂಪವನ್ನು ಪಡೆದುಕೊಳ್ಳುತ್ತವೆ.
ಪಿಸಿಓಡಿ ಅಥವಾ ಪಿಸಿಓಎಸ್ ನಿಂದಾಗಿ ಮಹಿಳೆಯರ ದೇಹದಲ್ಲಿ ಹಾರ್ಮೋನ್ ಅಸಮತೋಲನ ಹೆಚ್ಚಾಗುತ್ತದೆ. ಪ್ರತಿ ತಿಂಗಳು ಮುಟ್ಟಿನ ಸಮಯದಲ್ಲಿ ಮಹಿಳೆಯರು ಮೂಡ್ ಸ್ವಿಂಗ್, ಹಾರ್ಮೋನುಗಳ ಒತ್ತಡದಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪಿಸಿಓಡಿ ಅಥವಾ ಪಿಸಿಓಎಸ್ ಮುಟ್ಟಿನ ವೇಳೆ ರಕ್ತದ ಹರಿವಿನ ಮೇಲೂ ಪರಿಣಾಮ ಬೀರುತ್ತದೆ.ಹಾರ್ಮೋನುಗಳ ಅಸಮತೋಲನ ಕೂಡ ಹೆಚ್ಚಾಗುತ್ತದೆ.
ಪರಿಣಾಮ ಮಹಿಳೆಯರ ಕೂದಲಿನ ಬೇರುಗಳ ಜೈವಿಕ ಕಾರ್ಯವಿಧಾನವು ತೊಂದರೆಗೊಳಗಾಗುತ್ತದೆ ಮತ್ತು ಅವು ಸಾಕಷ್ಟು ಪೋಷಣೆಯನ್ನು ಪಡೆಯುವುದಿಲ್ಲ. ಈ ಕಾರಣದಿಂದಾಗಿ ಮಹಿಳೆಯರ ಕೂದಲು ತೆಳ್ಳಗಾಗಲು ಪ್ರಾರಂಭಿಸುತ್ತದೆ. ಬಳಿಕ ಕೂದಲು ವೇಗವಾಗಿ ಉದುರಿ ಹೋಗುತ್ತದೆ.
ಕೂದಲು ಉದುರುವಿಕೆ ತಡೆಯುವುದು ಹೇಗೆ?
ಕೂದಲು ಉದುರುವಿಕೆ ಕಾರಣ ಕಂಡುಕೊಂಡಾಗ ಮಾತ್ರ ಅದಕ್ಕೆ ಪರಿಹಾರ ಹುಡುಕಬಹುದು. ಪಿಸಿಓಎಸ್ ಮತ್ತು ಪಿಸಿಒಡಿಯಿಂದ ಕೂದಲು ಉದುರುವಿಕೆ ಸಂಭವಿಸಿದಾಗ ಅದನ್ನು ನಿಲ್ಲಿಸಲು ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳಿಂದ ಅಸಾಧ್ಯ. ಅದರೊಂದಿಗೆ ಔಷಧಿಗಳನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ. ಹಾಗಾಗಿ ವೈದ್ಯರ ಸಲಹೆಯನ್ನು ಪಡೆಯಿರಿ.