
ಕ್ಯಾನ್ಸರ್ ಮಾರಣಾಂತಿಕ ಕಾಯಿಲೆಯಾಗಿದ್ದು, ಇದು ಯಾರನ್ನಾದರೂ ಬಾಧಿಸಬಹುದು. ಇದು ದೇಹದ ಯಾವುದೇ ಭಾಗದಿಂದ ಪ್ರಾರಂಭವಾಗುತ್ತದೆ ಮತ್ತು ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ಇತರ ಭಾಗಗಳಿಗೂ ಹರಡಬಹುದು. ಜೀವಕೋಶಗಳ ಅನಿಯಂತ್ರಿತ ಬೆಳವಣಿಗೆಯಿಂದಾಗಿ ಈ ರೋಗ ಕಾಣಿಸಿಕೊಳ್ಳುತ್ತದೆ. ಅದಕ್ಕಾಗಿಯೇ ಕ್ಯಾನ್ಸರ್ ರೋಗಲಕ್ಷಣಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಕ್ಯಾನ್ಸರ್ ಯಾವ ಅಂಗದಲ್ಲಿ ಸಂಭವಿಸುತ್ತದೆ ಎಂಬುದನ್ನು ಈ ಲಕ್ಷಣಗಳ ಮೂಲಕವೇ ಪತ್ತೆ ಮಾಡಬಹುದು.
ಕೆಲವು ಕ್ಯಾನ್ಸರ್‌ಗಳು ಲಿಂಗ ಆಧಾರಿತವಾಗಿವೆ. ಮಹಿಳೆಯರಿಗೆ ಸ್ತ್ರೀರೋಗ ಕ್ಯಾನ್ಸರ್ ಇದ್ದಂತೆ. ಅಂತಹ ಇನ್ನೂ ಐದು ಕ್ಯಾನ್ಸರ್‌ಗಳು ಈ ವರ್ಗದಲ್ಲಿ ಬರುತ್ತವೆ. ದೇಹದ ಯಾವ ಭಾಗದಲ್ಲಿ ಕ್ಯಾನ್ಸರ್ ಇದೆ ಎಂಬುದನ್ನು ಗುರುತಿಸಲು ಕೆಲವೊಮ್ಮೆ ವಿಳಂಬವಾಗುತ್ತದೆ. ಇದೇ ಮುಂದೆ ಅಪಾಯಕ್ಕೆ ಕಾರಣವಾಗಬಹುದು. ಹಾಗಾಗಿ ಕ್ಯಾನ್ಸರ್‌ನ ಕೆಲವೊಂದು ಸಾಮಾನ್ಯ ಲಕ್ಷಣಗಳ ಬಗ್ಗೆ ತಿಳಿಯೋಣ.
ಗೈನಾಕಾಲಜಿಕಲ್ ಕ್ಯಾನ್ಸರ್ ಮಹಿಳೆಯರ ಸಂತಾನೋತ್ಪತ್ತಿ ಅಂಗಗಳಲ್ಲಿ ಸಂಭವಿಸುತ್ತದೆ. ಇದು ಮಹಿಳೆಯರ ಸೊಂಟದೊಳಗಿನ ವಿವಿಧ ಸ್ಥಳಗಳಿಂದ ಪ್ರಾರಂಭವಾಗುತ್ತದೆ. ಹೊಟ್ಟೆಯ ಅಡಿಯಲ್ಲಿ ಹಿಪ್ ಮೂಳೆಗಳ ಮಧ್ಯದ ಭಾಗವನ್ನೂ ಆವರಿಸಿಕೊಳ್ಳುತ್ತದೆ. ಯೋನಿ ಕ್ಯಾನ್ಸರ್, ವಲ್ವಾರ್ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್ ಇದರಲ್ಲಿ ಸೇರಿವೆ.
ರೋಗ ಲಕ್ಷಣಗಳು ಯಾವುವು?
ಬೆನ್ನು ನೋವು
ಯೋನಿ ತುರಿಕೆ, ಸುಡುವಿಕೆ ಮತ್ತು ನೋವು
ಊತ
ಯೋನಿಯಲ್ಲಿ ರಕ್ತಸ್ರಾವ
ಶ್ರೋಣಿಯ ನೋವು
ಮೂತ್ರವನ್ನು ಹಿಡಿದಿಟ್ಟುಕೊಳ್ಳುವ ತೊಂದರೆ
ಗೈನಕಾಲಾಜಿಕಲ್ ಕ್ಯಾನ್ಸರ್ ಯಾವುದೇ ಮಹಿಳೆಗೆ ಬರಬಹುದು. ಆದರೆ ಈ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಕೆಲವು ಅಂಶಗಳಿವೆ. ಅವುಗಳೆಂದರೆ ಧೂಮಪಾನ, ಕುಟುಂಬದ ಇತಿಹಾಸ, HPV ಸೋಂಕು, ಸ್ಥೂಲಕಾಯತೆ ಮತ್ತು 55 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸು.
ರೋಗ ಲಕ್ಷಣಗಳು ಕಾಣಿಸಿಕೊಂಡರೆ ಏನು ಮಾಡಬೇಕು?
ಆರಂಭಿಕ ಹಂತದಲ್ಲಿ ಚಿಕಿತ್ಸೆ ನೀಡಿದರೆ ಈ ಕ್ಯಾನ್ಸರ್ ಮಾರಣಾಂತಿಕವಾಗುವುದಿಲ್ಲ. ರೋಗ ಲಕ್ಷಣಗಳು ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸಿ. ಕ್ಯಾನ್ಸರ್ ಪತ್ತೆಗಾಗಿ ಎಂಡೊಮೆಟ್ರಿಯಲ್ ಅಂಗಾಂಶ ಪರೀಕ್ಷೆಯನ್ನು ಮಾಡಲಾಗುತ್ತದೆ. ಗರ್ಭಾಶಯ ಮತ್ತು ಗರ್ಭಕಂಠದ ಕ್ಯಾನ್ಸರ್‌ಗೆ ಪ್ಯಾಪ್ ಸ್ಮೀಯರ್ ಪರೀಕ್ಷೆ ಮಾಡುವಾಗ, ಗರ್ಭಕಂಠ, ಯೋನಿ, ಗರ್ಭಾಶಯ, ಫಾಲೋಪಿಯನ್ ಟ್ಯೂಬ್‌ಗಳು, ಅಂಡಾಶಯಗಳು ಮತ್ತು ಗುದನಾಳವನ್ನು ಪರೀಕ್ಷಿಸಲು ಶ್ರೋಣಿಯ ಪರೀಕ್ಷೆಯನ್ನು ಮಾಡಲಾಗುತ್ತದೆ.
ಗೈನಕಾಲಜಿಕಲ್ ಕ್ಯಾನ್ಸರ್‌ನಿಂದ ಪಾರಾಗಲು ತಜ್ಞರು HVP ಲಸಿಕೆಯನ್ನು ಶಿಫಾರಸು ಮಾಡುತ್ತಾರೆ. ಈ ಲಸಿಕೆಯಿಂದ ವಲ್ವಾರ್ ಕ್ಯಾನ್ಸರ್, ಗರ್ಭಕಂಠ, ಯೋನಿ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು. 11 ವರ್ಷದಿಂದ 12 ವರ್ಷದೊಳಗಿನ ಯಾವುದೇ ಬಾಲಕಿ ಈ ಲಸಿಕೆಯನ್ನು ಪಡೆಯಬಹುದು. ಇದಲ್ಲದೆ ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಳ್ಳುವುದರ ಜೊತೆಗೆ ರೋಗಲಕ್ಷಣಗಳನ್ನು ಗುರುತಿಸುವುದು ಬಹಳ ಮುಖ್ಯ.