ಹಾಸನ : ಮಹಿಳೆಗೆ ಸೇರಿದ್ದ ಜಮೀನಿನಲ್ಲಿ ಬೆಳೆದು ನಿಂತಿದ್ದ 60ಕ್ಕೂ ಅಧಿಕ ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ಕಡಿದು ಹೋಗಿದ್ದು, ದಿಕ್ಕು ಕಾಣದ ಮಹಿಳೆ ಗೋಳಾಟ ನಡೆಸಿದ್ದಾರೆ.
ಈ ಘಟನೆ ಜಿಲ್ಲೆಯ ಹನುಮನಹಳ್ಳಿಯಲ್ಲಿ ನಡೆದಿದೆ. ತಾಯಮ್ಮ ಎಂಬುವವರಿಗೆ ಸೇರಿದ್ದ ಹೊಲದಲ್ಲಿಯೇ ಬೆಳೆದು ನಿಂತಿದ್ದ 60ಕ್ಕೂ ಅಧಿಕ ಗಿಡಗಳನ್ನು ದುಷ್ಕರ್ಮಿಗಳು ಕಡಿದಿದ್ದಾರೆ. ಕಿಡಿಗೇಡಿಗಳ ಈ ಕೃತ್ಯದಿಂದಾಗಿ ರೈತ ಮಹಿಳೆಗೆ ಸುಮಾರು 1 ಲಕ್ಷ ರೂ. ಗೂ ಅಧಿಕ ನಷ್ಟವಾಗಿದ್ದು, ಮಹಿಳೆಗೆ ದಾರಿ ತೋಚದಂತಾಗಿದೆ.
ಕಳೆದ ಎರಡ್ಮೂರು ವರ್ಷಗಳಿಂದ ಈ ಮಹಿಳೆ ತಮ್ಮ ಹೊಲದಲ್ಲಿ ಅಡಿಕೆ ಮರಗಳನ್ನು ಬೆಳೆಸಿದ್ದರು. ಸಾಕಷ್ಟು ಶ್ರಮ ವಹಿಸಿ ಬೆಳೆಸಿದ್ದ ಗಿಡಗಳ್ನು ಕಡಿದು ಹಾಕಿದ್ದಕ್ಕೆ ತಾಯಮ್ಮ ಆಕ್ರೋಶ ವ್ಯಕ್ಪಡಿಸಿದ್ದಾರೆ.
ಅಲ್ಲದೇ, ಜಮೀನಿನಲ್ಲಿ ಈ ರೀತಿಯ ಕೃತ್ಯ ಎಸಗಿದವನನ್ನು ಕೂಡಲೇ ಬಂಧಿಸಿ, ಶಿಕ್ಷಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ಕುರಿತು ಮಹಿಳೆಯು ದುದ್ದು ಪೊಲೀಸ್ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.