ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನಲೆ, ಇಡೀ ವಿಶ್ವದಲ್ಲಿ ಈ ದಿನವನ್ನು ಮಹಿಳೆಯರಿಗಾಗಿ ಅರ್ಪಿಸಲಾಗಿದೆ. ಎಲ್ಲೆಡೆ ಸಂಭ್ರಮದಿಂದ ಮಹಿಳೆಯರ ದಿನವನ್ನು ಆಚರಿಸಲಾಗುತ್ತಿದೆ. ಇಂತಹ ದಿನವನ್ನು ಬೆಂಗಳೂರು ಪೊಲೀಸರು ವಿಭಿನ್ನವಾಗಿ ಆಚರಿಸಿದ್ದಾರೆ.
ಹೌದು, ಇಂದು ನಗರದ ಪೊಲೀಸ್ ಠಾಣೆಗಳಲ್ಲಿ ಮಹಿಳಾ ಸಿಬ್ಬಂದಿಗಳೇ ಇಡೀ ಠಾಣೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಮಹಿಳಾ ದಿನಾಚರಣೆ ಪ್ರಯುಕ್ತ ಈ ಇಡೀ ದಿನ ಸ್ಟೇಷನ್ ಹೌಸ್ ಅಫೀಸರ್ ಗಳಾಗಿ ಮಹಿಳಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ನಿನ್ನೆ ಆದೇಶ ಹೊರಡಿಸಿದ್ರು.
ಅವರ ಸೂಚನೆಯಂತೆ ಎಲ್ಲಾ ಠಾಣೆಗಳಲ್ಲಿ, ಸ್ಟೇಷನ್ ಅಫೀಸರ್ ಗಳಾಗಿ ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ವಾಕಿಟಾಕಿ ಹಿಡಿದು ಕಂಟ್ರೋಲ್ ರೂಂ ಜೊತೆ ಸಂವಹನ, ಠಾಣೆಯ ಕಚ್ಚಾ ಪುಸ್ತಕ, ಡೈರಿ, ಕೇಸ್ ಫೈಲ್ ಗಳ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಸ್ಟೇಷನ್ ಅಫೀಸರ್ ಆಗಿರೋದಕ್ಕೆ ಮಹಿಳಾ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದು, ಮಹಿಳಾ ದಿನಾಚರಣೆಯ ಶುಭ ಕೋರಿದ್ದಾರೆ.
ಇನ್ನು ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳಾ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಗಿದ್ದು, ಇಡೀ ಠಾಣೆಯನ್ನು ಗುಲಾಬಿ ಬಣ್ಣದ ಬಲೂನ್ ಗಳಿಂದ ಸಿಂಗರಿಸಲಾಗಿದೆ. ಈ ದಿನ ಇಡೀ ಠಾಣೆಯ ಜವಾಬ್ದಾರಿಯನ್ನು ಮಹಿಳಾ ಸಿಬ್ಬಂದಿಗೆ ನೀಡಿದ್ದು, ಶರಣಮ್ಮ ಎಂಬುವರನ್ನ ಸ್ಟೇಷನ್ ಎಸ್ಎಚ್ಒ ಆಗಿ ನಿಯೋಜಿಸಲಾಗಿದೆ.
ಠಾಣೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಮಹಿಳಾ ದಿನಾಚರಣೆ ಆಚರಿಸಿದ್ದು, ಠಾಣಾ ಅಧಿಕಾರಿಗಳಾಗಿ ಮಹಿಳಾ ಸಿಬ್ಬಂದಿಗಳಿಗೆ ಅವಕಾಶ ನೀಡಲಾಗಿದೆ. ಮಹಿಳೆಯರು ಹಾಗೂ ಶಾಲಾ ಹೆಣ್ಣು ಮಕ್ಕಳನ್ನ ಕರೆದು ಕೇಕ್ ಕತ್ತರಿಸಿದ ಪೊಲೀಸರು, ಮಹಿಳೆಯರ ಬಗ್ಗೆ ಗೌರವಯುತವಾಗಿರಬೇಕು ಎಂಬ ಸಂದೇಶ ನೀಡಿದ್ರು.