ಸಚಿವ ಏಕನಾಥ್ ಶಿಂಧೆ ನೇತೃತ್ವದಲ್ಲಿ 50ಕ್ಕೂ ಅಧಿಕ ಶಾಸಕರು ಬಂಡಾಯ ಎದ್ದಿರುವ ಪರಿಣಾಮ ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಸರ್ಕಾರ ಪತನದಂಚಿಗೆ ಬಂದು ತಲುಪಿದೆ. ಅಸ್ಸಾಂ ನ ಗುವಾಹಟಿಯಲ್ಲಿರುವ ಪಂಚತಾರ ಹೋಟೆಲ್ ರಾಡಿಸನ್ ಬ್ಲೂ ನಲ್ಲಿ ಹಲವು ದಿನಗಳಿಂದ ಬೀಡುಬಿಟ್ಟಿರುವ ಬಂಡಾಯ ಶಾಸಕರು ತಮ್ಮ ಪಟ್ಟು ಸಡಿಲಿಸುತ್ತಿಲ್ಲವಾದ ಕಾರಣ ‘ಮಹಾ ವಿಕಾಸ ಅಘಾಡಿ’ ಸರ್ಕಾರ ಪತನಗೊಳ್ಳುವುದು ಬಹುತೇಕ ಖಚಿತವಾಗಿದೆ.
ಈ ಶಾಸಕರನ್ನು ಸೆಳೆಯಲು ಹತ್ತಾರು ಅಸ್ತ್ರಗಳನ್ನು ಉದ್ಧವ್ ಠಾಕ್ರೆ ಮತ್ತಿತರರು ಬಳಸಿದರಾದರೂ ಯಾವುದೇ ಕಾರಣಕ್ಕೂ ಇಟ್ಟ ಹೆಜ್ಜೆಯಿಂದ ಹಿಂದೆ ಸರಿಯಲು ಸಾಧ್ಯವೇ ಇಲ್ಲ ಎಂಬ ಸಂದೇಶವನ್ನು ಬಂಡಾಯ ಶಾಸಕರುಗಳು ರವಾನಿಸಿದ್ದಾರೆ. ಅಲ್ಲದೆ ತಮ್ಮ ಮುಂದಿನ ನಡೆ ಎಂಬುದನ್ನೂ ಸಹ ಪರೋಕ್ಷವಾಗಿ ತಿಳಿಸಿದ್ದು, ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸುವುದು ನಿಶ್ಚಿತವಾಗಿದೆ. ಹೀಗಾಗಿ ಮಹಾರಾಷ್ಟ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಇದರ ಮಧ್ಯೆ ತಮ್ಮ ಸರ್ಕಾರ ಉಳಿಸಿಕೊಳ್ಳಲು ಕೊನೆಯ ಪ್ರಯತ್ನ ಎಂಬಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಬಂಡಾಯ ಶಾಸಕರುಗಳಿಗೆ ಭಾವನಾತ್ಮಕ ಸಂದೇಶ ಕಳುಹಿಸಿದ್ದಾರೆ. ಶಿವಸೇನೆ ಕುಟುಂಬದ ಮುಖ್ಯಸ್ಥನಾಗಿ ನಿಮಗೆಲ್ಲಾ ನಾನು ವಿನಂತಿ ಮಾಡುತ್ತಿದ್ದೇನೆ. ದಯವಿಟ್ಟು ಎಲ್ಲರೂ ಮುಂಬೈಗೆ ಬಂದು ನನ್ನೊಂದಿಗೆ ಮಾತನಾಡಿ. ಮಾತುಕತೆಯ ಮೂಲಕ ನಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳೋಣ. ಈ ಮಾತುಗಳನ್ನು ನಾನು ನನ್ನ ಹೃದಯದಿಂದ ಹೇಳುತ್ತಿದ್ದೇನೆ. ನಿಮ್ಮೆಲ್ಲರ ಬಗ್ಗೆ ಈಗಲೂ ನನಗೆ ಕಾಳಜಿ ಇದೆ. ದಯವಿಟ್ಟು ವಾಪಸ್ ಬನ್ನಿ ಎಂದು ಹೇಳಿದ್ದಾರೆ. ಇದಕ್ಕೆ ಬಂಡಾಯ ಶಾಸಕರುಗಳು ಎಷ್ಟರಮಟ್ಟಿಗೆ ಸ್ಪಂದಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.