ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಈಗ ಸಂಕಷ್ಟಕ್ಕೆ ಸಿಲುಕಿದೆ. ಉದ್ಧವ್ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿರುವ ಏಕನಾಥ ಶಿಂಧೆ ತಮ್ಮ ಬೆಂಬಲಿಗ ಶಾಸಕರೊಂದಿಗೆ ಗುಜರಾತಿಗೆ ತೆರಳಿದ್ದು, ‘ಔಟ್ ಅಫ್ ರೀಚ್’ ಆಗಿದ್ದಾರೆ. ಹೀಗಾಗಿ ಮಹಾ ಸರ್ಕಾರ ಬಹುಮತ ಕಳೆದುಕೊಂಡು ಪತನವಾಗಲಿದೆಯಾ ಎಂಬ ಪ್ರಶ್ನೆ ಮೂಡಿದೆ.
ಉದ್ಧವ್ ಠಾಕ್ರೆ ಅವರ ಆಪ್ತ ವಲಯದಲ್ಲಿದ್ದ ಏಕನಾಥ ಶಿಂಧೆ ಅವರೇ ಬಂಡಾಯದ ಬಾವುಟ ಬೀಸಿರುವುದು ಅಚ್ಚರಿಗೆ ಕಾರಣವಾಗಿದೆ. ಅಷ್ಟಕ್ಕೂ ಈ ಏಕನಾಥ ಶಿಂದೆಯವರ ಹಿನ್ನೆಲೆ ಇಂಟರೆಸ್ಟಿಂಗ್ ಆಗಿದೆ.
ಮಹಾರಾಷ್ಟ್ರದ ಠಾಣೆಯಲ್ಲಿ ಆಟೋರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಿದ್ದ ಮರಾಠ ಸಮುದಾಯದ ಏಕನಾಥ ಶಿಂಧೆ, ಬಾಳ ಸಾಹೇಬ್ ಠಾಕ್ರೆ ಅವರ ಉಗ್ರ ಹಿಂದುತ್ವದ ಪ್ರತಿಪಾದನೆಯನ್ನು ನೋಡಿ ಆಕರ್ಷಿತರಾಗಿ ಶಿವಸೇನೆ ಸೇರ್ಪಡೆಗೊಂಡಿದ್ದರು.
ಸತಾರ ಜಿಲ್ಲೆಯವರಾದ ಏಕನಾಥ ಶಿಂಧೆ ಪಕ್ಷನಿಷ್ಠೆ ಹಾಗೂ ಸಂಘಟನಾ ಚತುರತೆಯಿಂದ ಬಹುಬೇಗ ಹಂತಹಂತವಾಗಿ ರಾಜಕೀಯದಲ್ಲಿ ಮೇಲಕ್ಕೇರಿದರು. ಪುರಸಭೆ ಸದಸ್ಯರಾಗುವ ಮೂಲಕ ರಾಜಕೀಯ ಪ್ರವೇಶಿಸಿದ ಅವರು 2004ರಲ್ಲಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಈಗ 4ನೇ ಬಾರಿ ಶಾಸಕರಾಗಿರುವ ಅವರು ಉದ್ಧವ್ ಸಂಪುಟದಲ್ಲಿ ಸಚಿವರಾಗಿದ್ದಾರೆ. ಅವರ ಪುತ್ರ ಡಾ. ಶ್ರೀಕಾಂತ್ ಶಿಂಧೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.