ಮುಂಬೈ: ಲಕ್ಷಾಂತರ ರೈತರಿಗೆ ಮಹಾರಾಷ್ಟ್ರ ಸರ್ಕಾರ ಶುಭ ಸುದ್ದಿಯೊಂದನ್ನು ಪ್ರಕಟಿಸಿದೆ. ಮಂಗಳವಾರ ಹೊಸ ಹಣಕಾಸು ಯೋಜನೆಯನ್ನು ಪ್ರಕಟಿಸಿದ್ದು, ರಾಜ್ಯದ ಒಂದು ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಪ್ರತಿ ವರ್ಷ 6,000 ರೂ. ಆರ್ಥಿಕ ನೆರವು ನೀಡಲಾಗುವುದು. ನಮೋ ಶೆಟ್ಕರಿ ಮಹಾಸನ್ಮಾನ್ ಯೋಜನೆ ಎಂದು ಹೆಸರಿಸಲಾದ ಈ ಯೋಜನೆಗೆ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಅನುಮೋದನೆ ನೀಡಿದ್ರು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಕೇಂದ್ರದಿಂದ ವರ್ಷಕ್ಕೆ ಕಂತುಗಳಲ್ಲಿ ರೈತರಿಗೆ 6,000 ರೂ. ಪಾವತಿಸುತ್ತದೆ. ಸಚಿವ ಸಂಪುಟ ಸಭೆಯಲ್ಲಿ ರೈತರಿಗಾಗಿ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರವು ರೈತರಿಗೆ ವಾರ್ಷಿಕ 6,000 ರೂ.ಗಳನ್ನು ನೀಡಲು ನಿರ್ಧರಿಸಿತ್ತು. ಅದೇ ನಿರ್ಧಾರವನ್ನು ರಾಜ್ಯವು ತೆಗೆದುಕೊಂಡಿದ್ದು, ರಾಜ್ಯದ ರೈತರಿಗೆ 6,000 ರೂ. ಪಾವತಿಸಲಾಗುವುದು ಎಂದು ಸಿಎಂ ಹೇಳಿದ್ರು.
ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಾತನಾಡಿ, ರಾಜ್ಯ ಸರ್ಕಾರದ ಯೋಜನೆಯಿಂದ ಒಂದು ಕೋಟಿಗೂ ಹೆಚ್ಚು ರೈತರು ಪ್ರಯೋಜನ ಪಡೆಯಲಿದ್ದಾರೆ. ಈ ಹಿಂದೆ ವಿಧಾನಸಭೆಯಲ್ಲಿ ರಾಜ್ಯ ಬಜೆಟ್ ಮಂಡನೆ ವೇಳೆ ಫಡ್ನವೀಸ್ ಅವರು ಕೇಂದ್ರ ಸರ್ಕಾರದ ಪ್ರಮುಖ ಪಿಎಂ ಕಿಸಾನ್ ಯೋಜನೆಯಂತೆ ರೈತರ ಬ್ಯಾಂಕ್ ಖಾತೆಗಳಿಗೆ ತಮ್ಮ ಸರ್ಕಾರ ವರ್ಷಕ್ಕೆ 6,000 ರೂಪಾಯಿಗಳನ್ನು ವರ್ಗಾಯಿಸುತ್ತದೆ ಎಂದು ಹೇಳಿದ್ದರು.
ರೈತರಿಗೆ ನೇರ ವರ್ಗಾವಣೆಗಾಗಿ 6,900 ಕೋಟಿ ರೂಪಾಯಿ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ. 1.15 ಕೋಟಿ ಕೃಷಿಕ ಕುಟುಂಬಗಳಿಗೆ ಲಾಭವಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ. ಇದಲ್ಲದೆ ರೈತರಿಗೆ ಕೇವಲ 1 ರೂಪಾಯಿಗೆ ಬೆಳೆ ವಿಮೆ ಸಿಗಲಿದೆ ಎಂದು ಫಡ್ನವೀಸ್ ಹೇಳಿದ್ದಾರೆ.