ಮುಂಬೈ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಸಂಭವಿಸುತ್ತಿರುವ ಅನಾಹುತಗಳಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 138ಕ್ಕೆ ಏರಿಕೆಯಾಗಿದೆ. ಈವರೆಗೆ 90,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.
ಮಹಾ ಮಳೆ ಆರ್ಭಟಕ್ಕೆ ಮಹಾರಾಷ್ಟ್ರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಭೂಕುಸಿತ ಸಂಭವಿಸುತ್ತಿದೆ. ಕೊಂಕಣ್ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಮಳೆಯಿಂದ ಸಂಕಷ್ಟ ಎದುರಾಗಿದ್ದು, ರಾಯಘಡ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ 36 ಜನರು ಸೇರಿದಂತೆ ರಾಜ್ಯದಲ್ಲಿ ಈವರೆಗೆ 138 ಜನರು ಸಾವನ್ನಪ್ಪಿದ್ದಾರೆ ಎಂದು ಸಚಿವ ವಿಜಯ್ ವಡೆಟ್ಟಿವರ್ ತಿಳಿಸಿದ್ದಾರೆ.
54 ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿದ್ದು, ಮುಂದಿನ 24 ಗಂಟೆಗಳಲ್ಲಿ ರಾಯಘಡ, ರತ್ನಗಿರಿ, ಸಿಂಧುದುರ್ಗ, ಪುಣೆ, ಸತಾರಾ ಹಾಗೂ ಕೊಲ್ಹಾಪುರ ಸೇರಿದಂತೆ 6 ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ.