ಮಹತ್ವದ ಬೆಳವಣಿಗೆಯೊಂದರಲ್ಲಿ ಆರ್.ಎಸ್.ಎಸ್. ಮುಖ್ಯಸ್ಥ ಮೋಹನ್ ಭಾಗವತ್, ಅಖಿಲ ಭಾರತ ಇಮಾಮ್ ಸಂಘಟನೆಯ ಮುಖ್ಯಸ್ಥ ಇಮಾಮ್ ಉಮರ್ ಅಹಮದ್ ಇಲ್ಯಾಸಿ ಅವರನ್ನು ದೆಹಲಿಯ ಮಸೀದಿಯಲ್ಲಿ ಗುರುವಾರದಂದು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಅಲ್ಲದೆ ಇದೇ ಸಂದರ್ಭದಲ್ಲಿ ಉತ್ತರ ದೆಹಲಿಯ ಆಜಾದ್ ಪುರದಲ್ಲಿರುವ ತಜ್ವೀದುಲ್ ಕುರಾನ ಮದರಸಾಗೆ ಭೇಟಿ ನೀಡಿದ ಮೋಹನ್ ಭಾಗವತ್, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ. ದೇಶದ ಕೆಲವು ಭಾಗಗಳಲ್ಲಿ ಪ್ರಸ್ತುತ ಮತೀಯ ದ್ವೇಷದ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೋಮು ಸೌಹಾರ್ದತೆ ಬಲಪಡಿಸುವ ಉದ್ದೇಶದಿಂದ ಭಾಗವತ್ ಈ ಭೇಟಿ ನೀಡಿದ್ದಾರೆ ಎಂದು ಹೇಳಲಾಗಿದೆ.
ಈ ಭೇಟಿ ವೇಳೆ ಮೋಹನ್ ಭಾಗವತ್ ಅವರನ್ನು ‘ರಾಷ್ಟ್ರಪಿತ’ ಎಂದು ಇಲ್ಯಾಸಿ ಬಣ್ಣಿಸಿದರು ಎಂದು ಹೇಳಲಾಗಿದ್ದು, ಆಗ ರಾಷ್ಟ್ರಕ್ಕೆಲ್ಲ ಒಬ್ಬನೇ ಪಿತ. ಎಲ್ಲರೂ ದೇಶದ ಮಕ್ಕಳು ಎಂದು ಭಾಗವತ್ ಹೇಳಿದರು ಎನ್ನಲಾಗಿದೆ. ಅಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಇದ್ದರೆ ಮಾತ್ರ ದೇಶ ಮುನ್ನಡೆಯಲು ಸಾಧ್ಯ ಎಂದು ಭಾಗವತ್ ಪ್ರತಿಪಾದಿಸಿದರು ಎಂದು ತಿಳಿದುಬಂದಿದೆ.