ಮನೆಯಲ್ಲಿ ಪೂರಿ ಮಾಡುತ್ತಾ ಇರುತ್ತೇವೆ. ಭಾನುವಾರ ಬಂದಾಗ ಏನಾದರೂ ಸ್ಪೆಷಲ್ ಮಾಡಬೇಕು ಎಂಬ ಬೇಡಿಕೆ ಮನೆಯಲ್ಲಿ ಇರುತ್ತದೆ. ಹಾಗಾಗಿ ಈ ಮಸಾಲ ಪುರಿ ಒಮ್ಮೆ ಟ್ರೈ ಮಾಡಿ ನೋಡಿ. ಮಸಾಲೆಯ ಪರಿಮಳ, ಬಣ್ಣ ಎಲ್ಲರನ್ನು ಆಕರ್ಷಿಸುತ್ತದೆ. ಮಕ್ಕಳಿಗೂ ಇದು ಇಷ್ಟವಾಗುತ್ತೆ. ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಾಗ್ರಿಗಳು: 2 ಕಪ್ ಗೋಧಿ ಹಿಟ್ಟು, 2 ಟೇಬಲ್ ಸ್ಪೂನ್- ರವೆ, ½ ಟೀ ಸ್ಪೂನ್ ಖಾರದ ಪುಡಿ, ¼ ಟೀ ಸ್ಪೂನ್-ಅರಿಶಿನ, ½ ಟೀ ಸ್ಪೂನ್-ಕೊತ್ತಂಬರಿ ಪುಡಿ, ¼ ಟೀ ಸ್ಪೂನ್-ಜೀರಿಗೆ ಪುಡಿ, ½ ಟೀ ಸ್ಪೂನ್-ಗರಂ ಮಸಾಲ, ¼ ಟೀ ಸ್ಪೂನ್-ಓಂ ಕಾಳು, ಚಿಟಿಕೆ-ಇಂಗು, ½ ಟೀ ಸ್ಪೂನ್-ಉಪ್ಪು, 2 ಟೀ ಸ್ಪೂನ್-ಎಣ್ಣೆ, ¾ ಕಪ್ ನೀರು, ಕರಿಯಲು ಎಣ್ಣೆ.
ಒಂದು ದೊಡ್ಡ ಬೌಲ್ ಗೆ ಗೋಧಿಹಿಟ್ಟು, ರವಾ, ಖಾರದ ಪುಡಿ, ಅರಿಸಿನ ಪುಡಿ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಗರಂ ಮಸಾಲ, ಓಂ ಕಾಳು, ಚಿಟಿಕೆ ಇಂಗು, ಉಪ್ಪು, 1 ಟೀ ಸ್ಪೂನ್ ಎಣ್ಣೆ, ¾ ಕಪ್ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಪೂರಿ ಹಿಟ್ಟಿನ ಹದಕ್ಕೆ ನಾದಿಕೊಳ್ಳಿ.
ನಂತರ ಇದರ ಮೇಲೆ ಒಂದು ಚಮಚ ಎಣ್ಣೆ ಹಾಕಿ ಒಂದು ತಟ್ಟೆ ಮುಚ್ಚಿ 20 ನಿಮಿಷ ಹಾಗೇ ಬಿಡಿ. ನಂತರ ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು ಪೂರಿ ಲಟ್ಟಿಸಿ ಕಾದ ಎಣ್ಣೆಗೆ ಹಾಕಿ ಎರಡು ಕಡೆ ಚೆನ್ನಾಗಿ ಕರಿಯಿರಿ. ನಿಮ್ಮಿಷ್ಟದ ಸಾಂಬಾರು ಜತೆ ಸವಿಯಿರಿ.