ರಾಜ್ಯದಲ್ಲಿ ಈ ಬಾರಿ ಮುಂಗಾರು ನಿಗದಿಯಂತೆ ಆರಂಭವಾಗಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಆರಂಭದಲ್ಲಿಯೇ ವರುಣ ಆರ್ಭಟಿಸಿರುವುದರಿಂದ ಜಲಾಶಯಗಳು ಸಹ ತುಂಬಲಾರಂಭಿಸಿವೆ. ಹೀಗಾಗಿ ಈ ಬಾರಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿ ರೈತರಿದ್ದು, ಜಲಾಶಯಗಳು ತುಂಬುತ್ತಿರುವ ಕಾರಣ ವಿದ್ಯುತ್ ಉತ್ಪಾದನೆಗೂ ಅಡ್ಡಿಯಾಗುವುದಿಲ್ಲವೆಂದು ಹೇಳಲಾಗುತ್ತಿದೆ.
ಇದರ ಮಧ್ಯೆ ಕಳೆದ ಎರಡು ದಿನಗಳಿಂದ ಮಳೆ ಆರ್ಭಟ ಕೊಂಚ ಕಡಿಮೆಯಾಗಿದ್ದು, ಬಿಸಿಲು ಕಾಣಿಸಿಕೊಳ್ಳತೊಡಗಿದೆ. ಆದರೆ ಹವಾಮಾನ ಇಲಾಖೆ ಮಳೆ ಕುರಿತಂತೆ ಮಹತ್ವದ ಮಾಹಿತಿ ನೀಡಿದೆ.
ಜುಲೈ 5ರ ವರೆಗೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜುಲೈ 5ರ ವರೆಗೆ ಬಹುತೇಕ ಎಲ್ಲಾ ಕಡೆ ಮಳೆಯಾಗಲಿದೆ ಎಂದು ತಿಳಿಸಿದ್ದು, ಶಿವಮೊಗ್ಗ, ಹಾಸನ, ಬೆಂಗಳೂರು, ಚಿತ್ರದುರ್ಗ, ಚಿಕ್ಕಮಗಳೂರು, ಕೊಡಗು ಹಾಗೂ ತುಮಕೂರು ಜಿಲ್ಲೆಯ ಕೆಲವೊಂದು ಭಾಗಗಳಲ್ಲಿ ಮಾತ್ರ ಮಳೆಯಾಗಲಿದೆ ಎಂದು ಹೇಳಿದೆ.