ನಾಡಿನ ಎಲ್ಲೆಡೆ ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಇಂದು ಗೌರಿ ಹಬ್ಬ ಹಿನ್ನೆಲೆಯಲ್ಲಿ ಸಡಗರದ ವಾತಾವರಣ ಕಂಡು ದೇವಸ್ಥಾನಗಳಲ್ಲೂ ಬೆಳಗ್ಗೆಯಿಂದಲೇ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಕಳೆದೆರೆಡು ದಿನಗಳಿಂದ ರಾಜ್ಯದ ವಿವಿಧೆಡೆ ಭಾರಿ ಮಳೆ ಆಗುತ್ತಿದೆ. ಮಂಗಳವಾರ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಸಣ್ಣ ಮಳೆಯ ನಡುವೆಯೂ ಬೆಳಗ್ಗೆಯಿಂದಲೇ ದೇವಾಲಯಗಳಲ್ಲಿ ಭಕ್ತರು ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ.
ಗೌರಿಗೆ ಸುಮಂಗಲಿಯರು ಬಾಗಿನ ಅರ್ಪಿಸಿ, ಪೂಜೆ ಸಲ್ಲಿಸುತ್ತಿರುವ ದೃಶ್ಯ ಅಲ್ಲಲ್ಲಿ ಕಂಡುಬಂದಿತು. ಮನೆ, ಮನೆಗಳಲ್ಲಿ ರಂಗೋಲಿ ಬಿಡಿಸಿ, ತಳಿರು ತೋರಣ ಕಟ್ಟಿ, ಗೌರಿ ಮೂರ್ತಿಗೆ ಹೂವಿನ ಅಲಂಕಾರ ಮಾಡಿ ಬಾಗಿನ ಸಿದ್ದಪಡಿಸಿ, ಭಕ್ತಿಯಿಂದ ಪೂಜೆ ಸಲ್ಲಿಸಿದರು.
ಗೌರಿ ಗಣೇಶ ಹಬ್ಬಕ್ಕೆ ಹೂವು, ಹಣ್ಣು ಖರೀದಿಗೆ ತೆರಳಿದ ಗ್ರಾಹಕರಿಗೆ ಹಬ್ಬದ ಬಿಸಿ ತಟ್ಟಿದೆ. ಹೂವು, ಹಣ್ಣುಗಳ ಬೆಲೆ ಸಾಮಾನ್ಯ ದಿನಗಳಿಗಿಂತ ಹೆಚ್ಚಾಗಿದೆ. ಮಾರುಕಟ್ಟೆಗಳಲ್ಲಿ ಖರೀದಿ ಜೋರಾಗಿ ಕಂಡು ಬಂದಿದೆ. ಎಲ್ಲೆಡೆ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ವ್ಯಾಪಾರ ವಹಿವಾಟು ಭರದಿಂದ ಸಾಗಿದೆ.
ಹಬ್ಬಕ್ಕೆ ಹೂವಿನ ವ್ಯಾಪಾರ ಭರ್ಜರಿಯಾಗಿ ನಡೆದಿದೆ. ಕನಕಾಂಬರ, ಮಲ್ಲಿಗೆ, ಸೇವಂತಿಗೆ, ಸುಗಂಧರಾಜ ಹಲವಾರು ವಿಧದ ಹೂಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಖರೀದಿಯೂ ಜೋರಾಗಿ ಸಾಗಿದೆ. ಮಲ್ಲಿಗೆ ಸೇವಂತಿಗೆ ಕನಕಾಂಬರ ಮಾರಂದಕ್ಕೆ ನೂರು ರೂ. ಗಡಿ ದಾಟಿದೆ. ಮಳೆ ಹೆಚ್ಚಾಗಿರುವ ಕಾರಣದಿಂದ ಹೂವಿನ ಬೆಲೆ ದುಬಾರಿ ಆಗಿದೆ. ಬೆಲೆ ಏರಿಕೆ ನಡುವೆಯೂ ಹಬ್ಬದ ಸಂಭ್ರಮ ಕಂಡು ಬಂದಿದೆ.
ಗೌರಿ, ಗಣೇಶ ಹಬ್ಬಕ್ಕೆ ತಮ್ಮ ತಮ್ಮ ಊರುಗಳಿಗೆ ತೆರಳುವ ಮಂದಿಗೆ ಕೂಡ ಕೆಎಸ್ಆರ್ಟಿಸಿ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದ್ದು, ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ. ರಾಜ್ಯದಾದ್ಯಂತ ಮನೆ, ಮನೆಗಳಲ್ಲೂ ಗೌರಿ ಹಬ್ಬದ ಸಂಭ್ರಮ ಮನೆ ಮಾಡಿದೆ.