ಸಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ಅತಿವೃಷ್ಟಿಯಿಂದಾಗಿ ರೈತರಿಗೆ ಅಪಾರ ಬೆಳೆ ನಷ್ಟವಾಗಿದೆ. ಬೆಳೆ ನಾಶದಿಂದ ಕಂಗಾಲಾಗಿ ಕುಳಿತಿರೋ ಅನ್ನದಾತರಿಗೆ ಸರ್ಕಾರ ನೆಮ್ಮದಿಯ ಸುದ್ದಿಯೊಂದನ್ನು ಕೊಟ್ಟಿದೆ. ರೈತರಿಗೆ ಸರ್ಕಾರ, ವಿದ್ಯುತ್ ಬಿಲ್ ಪಾವತಿಯಿಂದ ವಿನಾಯಿತಿ ನೀಡಿದೆ. ಅತಿವೃಷ್ಟಿಯಿಂದ ನಷ್ಟ ಅನುಭವಿಸುತ್ತಿರುವ ರೈತರಿಗೆ ವಿದ್ಯುತ್ ಬಿಲ್ ಪಾವತಿಸಲು ಒತ್ತಾಯಿಸುವಂತಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರದ ಈ ನಿರ್ಧಾರದಿಂದ ಲಕ್ಷಾಂತರ ರೈತರಿಗೆ ಅನುಕೂಲವಾಗಲಿದೆ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ‘ರಾಜ್ಯದ ವಿದ್ಯುತ್ ಘಟಕಗಳಿಗೆ ಸಂಬಂಧಿಸಿದ ಏಜೆನ್ಸಿಗಳು ಮಳೆಯಿಂದ ಸಾಕಷ್ಟು ನಷ್ಟಕ್ಕೊಳಗಾದ ರೈತರಿಗೆ ಬಿಲ್‌ಗಳನ್ನು ಜಮಾ ಮಾಡುವಂತೆ ಒತ್ತಡ ಹೇರುವುದಿಲ್ಲ. ಈ ರೈತರು ಎರಡು ತಿಂಗಳವರೆಗೆ ವಿದ್ಯುತ್ ಬಿಲ್ ಪಾವತಿಸಬೇಕಾಗಿಲ್ಲʼ ಎಂದವರು ಹೇಳಿದ್ದಾರೆ. ಹಾಗಾಗಿ ಮಹಾರಾಷ್ಟ್ರದಲ್ಲಿ ಅನ್ನದಾತರು ಸಪ್ಟೆಂಬರ್ ಮತ್ತು ಅಕ್ಟೋಬರ್ ಎರಡೂ ತಿಂಗಳ ವಿದ್ಯುತ್ ಬಿಲ್ ಪಾವತಿಸಬೇಕಾಗಿಲ್ಲ.
ರೈತರಿಗೆ ವಿದ್ಯುತ್ ಬಿಲ್ ಪಾವತಿಸುವಂತೆ ಒತ್ತಡ ಹೇರಬಾರದೆಂದು ರಾಜ್ಯ ವಿದ್ಯುತ್ ವಿತರಣಾ ಕಂಪನಿ ಅಧಿಕಾರಿಗಳಿಗೂ ಸರ್ಕಾರ ಆದೇಶಿಸಿದೆ. ಇದರ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ರೈತರಿಗೆ ಶಾಕ್ ಕೂಡ ಕೊಟ್ಟಿದೆ. ಹಲವು ರೈತರ ವಿದ್ಯುತ್ ಬಿಲ್ ಬಹಳ ದಿನಗಳಿಂದ ಬಾಕಿ ಉಳಿದಿದ್ದು, ಅವರ ಸಂಪರ್ಕ ಕಡಿತಗೊಳಿಸಲು ಕ್ರಮ ಕೈಗೊಳ್ಳಲು ಸರಕಾರ ಮುಂದಾಗಿದೆ.