ಗುಚಿ ಹಾಗೂ ಅಡಿಡಾಸ್ ತಮ್ಮ ದುಬಾರಿ ಉತ್ಪನ್ನಗಳಿಂದಲೇ ಫೇಮಸ್. ಇದೀಗ ಎರಡೂ ಕಂಪನಿಗಳು ಜೊತೆಯಾಗಿ ಚೀನಾದ ಮಾರುಕಟ್ಟೆಗೆ ಅತ್ಯಂತ ದುಬಾರಿ ಛತ್ರಿಯೊಂದನ್ನು ಬಿಡುಗಡೆ ಮಾಡಿವೆ.
ಈ ಛತ್ರಿಯ ಬೆಲೆ 1,644 ಡಾಲರ್. ಅಂದ್ರೆ ಸರಿಸುಮಾರು 1,27,746 ರೂಪಾಯಿ. ಈ ಕಾಸ್ಟ್ಲಿ ಛತ್ರಿ ಚೀನಾದ ಗ್ರಾಹಕರಿಂದ ಸಾಕಷ್ಟು ಟೀಕೆಗಳನ್ನೂ ಎದುರಿಸ್ತಾ ಇದೆ. ಇಷ್ಟೆಲ್ಲಾ ಹಣ ಕೊಟ್ಟು ಖರೀದಿ ಮಾಡಿದ್ರೂ ಈ ಕೊಡೆ ನಿಮ್ಮನ್ನು ಮಳೆಯಿಂದ ರಕ್ಷಣೆ ಮಾಡುವುದಿಲ್ಲ. ಏಕೆಂದರೆ ಇದು ಜಲನಿರೋಧಕವಲ್ಲ.
ನೋಡಿದ್ರೆ ಇದು ಸನ್ ಅಂಬ್ರೆಲ್ಲಾದಂತೆ ಕಾಣುತ್ತದೆ. ಇಂಟರ್‌ಲಾಕಿಂಗ್ ಜಿ ಮತ್ತು ಟ್ರೆಫಾಯಿಲ್ ವಿನ್ಯಾಸವನ್ನು ಹೊಂದಿದೆ. ಕೆತ್ತನೆ ಮಾಡಿದ ಮರದ ಹಿಡಿಕೆ, ಹಸಿರು ಮತ್ತು ಕೆಂಪು ಬಣ್ಣದ ಚಿತ್ರಗಳು ಇದರ ಪ್ರಮುಖ ಆಕರ್ಷಣೆ. ಹ್ಯಾಂಡಲ್ ಮೇಲೆ ಜಿ ಎಂದು ಕೆತ್ತಲಾಗಿದೆ.
ಬಿಸಿಲಿನಿಂದ ಮಾತ್ರ ಈ ಛತ್ರಿ ನಿಮ್ಮನ್ನು ರಕ್ಷಿಸಬಲ್ಲದು. ಜೊತೆಗೆ ಅಲಂಕಾರದ ಉದ್ದೇಶಕ್ಕೆ ಬಳಸಿಕೊಳ್ಳಬಹುದಷ್ಟೆ. ಅಷ್ಟೇನೂ ಪ್ರಯೋಜನಕ್ಕೆ ಬಾರದ ಛತ್ರಿಗೆ ಭಾರೀ ಬೆಲೆ ವಿಧಿಸಿರೋದು ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗ್ತಿದೆ.
ಮಳೆಯಿಂದ್ಲೂ ಕಾಪಾಡದ ಕೊಡೆ ಇಷ್ಟೊಂದು ಬೆಲೆಗೆ ಮಾರಾಟವಾಗುತ್ತಿರುವುದು ಏಕೆ ಎಂದು ಹಲವರು ಪ್ರಶ್ನಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ಕೂಡ ಸಾಕಷ್ಟು ಕಮೆಂಟ್‌ಗಳು ಹರಿದಾಡುತ್ತಿವೆ. ಚೀನಾದಲ್ಲಿ ಐಷಾರಾಮಿ ವಸ್ತುಗಳಿಗೆ ಗಮನಾರ್ಹ ಬೇಡಿಕೆಯಿದೆ. 2025ರ ವೇಳೆಗೆ ವಿಶ್ವದ ಅತಿದೊಡ್ಡ ಐಷಾರಾಮಿ ಮಾರುಕಟ್ಟೆಯಾಗುವ ಹಾದಿಯಲ್ಲಿದೆ ಚೀನಾ. ಹಾಗಾಗಿಯೇ ಈ ಗುಚಿ ಕಂಪನಿಯ ಛತ್ರಿ ಕೂಡ ಚೀನಾ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.