ಮುಂಗಾರು ಆರಂಭವಾಯ್ತು ಅಂದ್ರೆ ಎಲ್ಲರಿಗೂ ಖುಷಿ. ಬಿರು ಬಿಸಿಲು, ಸೆಖೆಯಿಂದ ಮುಕ್ತಿ ಸಿಕ್ತಲ್ಲ ಅನ್ನೋ ಸಮಾಧಾನ. ಆದ್ರೆ ಮಾನ್ಸೂನ್ ಆರಂಭದೊಂದಿಗೆ ರೋಗಗಳ ಅಪಾಯವೂ ಹೆಚ್ಚಾಗುತ್ತದೆ. ಈ ಋತುವಿನಲ್ಲಿ ಸಾಮಾನ್ಯವಾಗಿ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನೆಗಡಿ, ಕೆಮ್ಮು, ಜ್ವರ ಸೇರಿದಂತೆ ಅನೇಕ ಬಗೆಯ ಆರೋಗ್ಯ ಸಮಸ್ಯೆಗಳೂ ಶುರುವಾಗುತ್ತವೆ.
ಇವುಗಳನ್ನು ತಡೆಯಲು ನಾವು ಸೇವಿಸುವ ಆಹಾರದ ಬಗ್ಗೆ ಗಮನಹರಿಸಬೇಕು. ಮುಂಗಾರಿನಲ್ಲಿ ಹೆಸರುಬೇಳೆ ಖಿಚಡಿ ಸೇವನೆಯಿಂದ ಸಾಕಷ್ಟು ಪ್ರಯೋಜನವಾಗುತ್ತದೆ. ಹೆಸರು ಬೇಳೆಯಲ್ಲಿ ತಾಮ್ರ, ಫೋಲೇಟ್, ರೈಬೋಫ್ಲಾವಿನ್, ವಿಟಮಿನ್, ವಿಟಮಿನ್ ಸಿ, ಫೈಬರ್, ಪೊಟ್ಯಾಸಿಯಮ್, ರಂಜಕ, ಮೆಗ್ನೀಸಿಯಮ್, ಕಬ್ಬಿಣ, ವಿಟಮಿನ್ ಬಿ -6, ನಿಯಾಸಿನ್, ಥಯಾಮಿನ್ ಸೇರಿದಂತೆ ಅನೇಕ ಪೋಷಕಾಂಶಗಳಿರುತ್ತವೆ.
ಇದರಲ್ಲಿರುವ ಫೈಬರ್ ಅಂಶ ಕರುಳಿನಲ್ಲಿರುವ ಕೊಳೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಮೂಂಗ್ ದಾಲ್ ನಿಮಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದನ್ನು ಮಾಡುವುದು ಕೂಡ ಬಹಳ ಸುಲಭ. ಖಿಚಡಿ ಸಾಂಪ್ರದಾಯಿಕ ಪಾಕವಿಧಾನಗಳಲ್ಲಿ ಒಂದಾಗಿದೆ. ಹೆಸರು ಬೇಳೆ ಮತ್ತು ಅನ್ನದ ಕಾಂಬಿನೇಶನ್ ಇದು. ಅನಾರೋಗ್ಯಕ್ಕೆ ತುತ್ತಾದಾಗಲೂ ಈ ಖಿಚಡಿ ಸೇವನೆ ಮಾಡಿದ್ರೆ ಜೀರ್ಣಕ್ರಿಯೆಗೆ ಸುಲಭವಾಗುತ್ತದೆ.
ಅಕ್ಕಿ ಮತ್ತು ಬೇಳೆಯನ್ನು ಚೆನ್ನಾಗಿ ತೊಳೆದು ಅರ್ಧ ಘಂಟೆ ನೀರಿನಲ್ಲಿ ನೆನೆಸಿ. ನಂತರ ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ, ಜೀರಿಗೆ, ಇಂಗು, ಕರಿಬೇವು, ಹಸಿ ಮೆಣಸಿನಕಾಯಿ, ಶುಂಠಿ ಮತ್ತು ಸ್ವಲ್ಪ ಸಾಸಿವೆ ಹಾಕಿ. ಅದು ಚಟಪಟ ಅಂದ ಮೇಲೆ ಅದಕ್ಕೆ ಅಕ್ಕಿ ಮತ್ತು ಹೆಸರು ಬೇಳೆಯನ್ನು ಸೇರಿಸಿ ಸ್ವಲ್ಪ ಹುರಿಯಿರಿ. ಬಳಿಕ ಅಳತೆಗೆ ತಕ್ಕಂತೆ ನೀರು ಸೇರಿಸಿ, ಮಧ್ಯಮ ಉರಿಯಲ್ಲಿ ಬೇಯಿಸಿ. ನಿಮಗೆ ಬೇಕಾದ ತರಕಾರಿಗಳನ್ನು ಸಹ ಜೊತೆಗೆ ಸೇರಿಸಬಹುದು. ಖಿಚಡಿ ಬೆಂದ ಬಳಿಕ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ, ಬಿಸಿಯಾಗಿ ಸೇವಿಸಿ.
ಹೆಸರು ಬೇಳೆ ಖಿಚಡಿಯ ಪ್ರಯೋಜನಗಳು…
ಈ ಖಿಚಡಿ ತಿಂದರೆ ತೂಕ ಕಡಿಮೆಯಾಗುತ್ತದೆ. ತೂಕ ಕಡಿಮೆ ಮಾಡಿಕೊಳ್ಳಲು ದೇಹದಲ್ಲಿ ಪ್ರೊಟೀನ್ ಮಟ್ಟವನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಖಿಚಡಿ ಸೇವನೆಯಿಂದ ಹೊಟ್ಟೆಯ ಸಮಸ್ಯೆಗಳು ದೂರವಾಗುತ್ತವೆ. ಜೊತೆಗೆ ಖಿಚಡಿ ದೇಹವನ್ನು ಡಿಟಾಕ್ಸ್ ಮಾಡಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಗೆ ಇದು ತುಂಬಾ ಪ್ರಯೋಜನಕಾರಿ. ಆಗಾಗ ಹೊಟ್ಟೆ ನೋವಿನ ಸಮಸ್ಯೆ ಕಾಣಿಸಿಕೊಳ್ತಾ ಇದ್ರೆ ಈ ಖಿಚಡಿಯನ್ನು ಸೇವನೆ ಮಾಡಿ.