ನಮ್ಮಲ್ಲಿ ಹೆಚ್ಚಿನವರು ಮಳೆಗಾಲದಲ್ಲಿ ಒಮ್ಮೆಯಾದರೂ ಮಳೆನೀರಲ್ಲಿ ನೆನೆಯಲು ಇಷ್ಟಪಡುತ್ತಾರೆ. ಏಕೆಂದರೆ ಸುಡುವ ಬಿಸಿಲು, ಆರ್ದ್ರತೆ ಮತ್ತು ನಿರಂತರ ಶಾಖದ ಅಲೆಯ ನಂತರ ಮಳೆ ಹನಿಗಳು ಆಕಾಶದಿಂದ ತೊಟ್ಟಿಕ್ಕಿದಾಗ ಮನಸ್ಸಿಗೆ ಸಮಾಧಾನವಾಗುತ್ತದೆ. ಆದರೆ ಬದಲಾಗುತ್ತಿರುವ ಹವಾಮಾನವು ಬಹಳಷ್ಟು ಸಮಸ್ಯೆಗಳನ್ನೂ ತರುತ್ತದೆ. ಇವುಗಳಲ್ಲೊಂದು ನೆತ್ತಿ ಮತ್ತು ತಲೆಯಲ್ಲಿ ತುರಿಕೆ.
ಸಾಮಾನ್ಯವಾಗಿ ತಲೆಹೊಟ್ಟು ವಿಪರೀತವಾದಾಗ ತುರಿಕೆ ಉಂಟಾಗುತ್ತದೆ. ತುರಿಕೆ ಹಾಗೂ ತಲೆಹೊಟ್ಟು ನಿವಾರಣೆಗೆ ಸಾಕಷ್ಟು ಕಸರತ್ತು ಮಾಡಿದ್ರೂ ಪ್ರಯೋಜನವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಕೆಲವೊಂದು ಮನೆಮದ್ದುಗಳನ್ನು ಪ್ರಯತ್ನಿಸಿ, ಇವುಗಳಿಂದ ಅತಿ ಶೀಘ್ರದಲ್ಲಿ ತುರಿಕೆ ಮಾಯವಾಗುತ್ತದೆ.
ಮೆಂತ್ಯ – ನೆತ್ತಿಯಲ್ಲಿ ತುರಿಕೆಗೆ ಮೆಂತ್ಯ ಕಾಳಿನಿಂದ ಪರಿಹಾರವಿದೆ. ಒಂದು ಚಮಚ ಮೆಂತ್ಯದ ಕಾಳುಗಳು ಹಾಗೂ ಒಂದು ಚಮಚ ಸಾಸಿವೆಯನ್ನು ನೀರಿನಲ್ಲಿ ನೆನೆಸಿ. ಎರಡನ್ನೂ ಮಿಕ್ಸರ್‌ನಲ್ಲಿ ರುಬ್ಬಿಕೊಂಡು ಪೇಸ್ಟ್ ಮಾಡಿಟ್ಟುಕೊಳ್ಳಿ. ಈ ಮಿಶ್ರಣವನ್ನು ನೆತ್ತಿ ಹಾಗೂ ತಲೆಕೂದಲಿನ ಬುಡಕ್ಕೆ ಚೆನ್ನಾಗಿ ಹಚ್ಚಿ. ಸುಮಾರು 30 ನಿಮಿಷಗಳ ಕಾಲ ಬಿಡಿ. ಬಳಿಕ ತಲೆಸ್ನಾನ ಮಾಡಿ.
ನಿಂಬೆ ರಸ – ನಿಂಬೆಯ ಔಷಧೀಯ ಗುಣಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ, ಇದು ಕೂದಲಿಗೆ ತುಂಬಾ ಪ್ರಯೋಜನಕಾರಿ. ನೆತ್ತಿಯಲ್ಲಿನ ತುರಿಕೆಯನ್ನು ಸಹ ಇದು ಹೋಗಲಾಡಿಸುತ್ತದೆ. ಒಂದು ಚಮಚ ನಿಂಬೆ ರಸವನ್ನು ತೆಗೆದುಕೊಂಡು ಅದನ್ನು ಒಂದು ಕಪ್ ನೀರಿನಲ್ಲಿ ಮಿಶ್ರಣ ಮಾಡಿ. ನಂತರ ಅದನ್ನು ಕೂದಲಿಗೆ ಹಚ್ಚಿ ಸುಮಾರು 15 ನಿಮಿಷಗಳ ಕಾಲ ಹಾಗೆ ಬಿಡಿ. ಬಳಿಕ ಸ್ವಚ್ಛವಾದ ನೀರಿನಿಂದ ಕೂದಲನ್ನು ತೊಳೆಯಿರಿ. ವಾರದಲ್ಲಿ 2 ಬಾರಿ ಈ ವಿಧಾನವನ್ನು ಅನುಸರಿಸಿದರೆ ತುರಿಕೆ ಸಮಸ್ಯೆ ಶೀಘ್ರದಲ್ಲೇ ದೂರವಾಗುತ್ತದೆ.
ಕ್ಯಾಸ್ಟರ್ ಆಯಿಲ್ – ಕ್ಯಾಸ್ಟರ್ ಆಯಿಲ್ ಸಹಾಯದಿಂದ ತಲೆಯಲ್ಲಿನ ತುರಿಕೆಯನ್ನು ತೆಗೆದುಹಾಕಬಹುದು. 1 ಚಮಚ ಕ್ಯಾಸ್ಟರ್ ಆಯಿಲ್, 1 ಟೀಚಮಚ ಸಾಸಿವೆ ಎಣ್ಣೆ ಮತ್ತು 1 ಚಮಚ ತೆಂಗಿನ ಎಣ್ಣೆಯನ್ನು ಮಿಶ್ರಣ ಮಾಡಿ. ರಾತ್ರಿ ಕೂದಲಿನ ಬೇರುಗಳಿಗೆ ಈ ಮಿಶ್ರಣದಿಂದ ಮಸಾಜ್ ಮಾಡಿ. ಬೆಳಗ್ಗೆ ತಲೆಯನ್ನು ಶುದ್ಧ ನೀರಿನಿಂದ ತೊಳೆಯಿರಿ. ಇದರ ಪರಿಣಾಮ ಕೆಲವೇ ದಿನಗಳಲ್ಲಿ ಗೋಚರಿಸುತ್ತದೆ.