
ಮುಂಗಾರು ಶುರುವಾಗ್ತಿದ್ದಂತೆ ಮೊದಲ ಮಳೆಯಲ್ಲಿ ನೆನೆಯಬೇಕು ಅನ್ನೋ ಆಸೆ ಸಹಜ. ಆದ್ರೆ ನೆಗಡಿ, ಕೆಮ್ಮಿನ ಭಯದಿಂದ ನಾವು ಸುಮ್ಮನಾಗುತ್ತೇವೆ. ಮಕ್ಕಳಿಗೆ ಈ ಅಪಾಯದ ಅರಿವಿರುವುದಿಲ್ಲ. ಮಳೆಗಾಲದಲ್ಲಿ ನೆನೆಯೋದು ಅಂದ್ರೆ ಮಕ್ಕಳಿಗೆ ಬಹಳ ಪ್ರೀತಿ. ಆದ್ರೆ ಇದರಿಂದ ಸೋಂಕಿನ ಅಪಾಯ ಹೆಚ್ಚಾಗುತ್ತದೆ.
ಮಗುವಿನ ರೋಗ ನಿರೋಧಕ ಶಕ್ತಿ ಚೆನ್ನಾಗಿದ್ದರೆ ಇಂತಹ ಸೋಂಕಿನಿಂದ ಪಾರಾಗಬಹುದು. ಕೊರೊನಾ ಸಾಂಕ್ರಾಮಿಕದಿಂದಾಗಿ ಎಲ್ಲರಲ್ಲೂ ಈಗ ಇಮ್ಯೂನಿಟಿ ಹೆಚ್ಚಿಸಿಕೊಳ್ಳುವ ಬಗ್ಗೆ ಆಸಕ್ತಿ ಮೂಡಿದೆ. ರೋಗ ನಿರೋಧಕ ಶಕ್ತಿ ಸುಧಾರಿಸದೇ ಇದ್ದರೆ ಅನೇಕ ರೋಗಗಳು ದಾಳಿ ಮಾಡಬಹುದು. ಮಕ್ಕಳಲ್ಲೂ ಇಮ್ಯೂನಿಟಿ ಹೆಚ್ಚಿಸದೇ ಇದ್ದರೆ ಬದಲಾಗುತ್ತಿರುವ ಋತುವಿನಲ್ಲಿ ಅವರ ಆರೋಗ್ಯ ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ.
ಆರೋಗ್ಯಕರ ಆಹಾರವನ್ನು ನೀಡಿ: ಆರೋಗ್ಯಕರ ಆಹಾರ ಮಕ್ಕಳ ಮೊದಲ ಆದ್ಯತೆ. ಆರೋಗ್ಯಕರ ಆಹಾರವನ್ನು ಸೇವಿಸದಿದ್ದರೆ ದೇಹವು ಸಾಕಷ್ಟು ಪೋಷಣೆಯನ್ನು ಪಡೆಯುವುದಿಲ್ಲ. ಅನೇಕ ರೀತಿಯ ಸೋಂಕುಗಳಿಗೆ ಮಕ್ಕಳು ಸುಲಭವಾಗಿ ತುತ್ತಾಗುತ್ತಾರೆ. ಹಾಲು, ರೊಟ್ಟಿ, ಓಟ್ಸ್, ಹಸಿರು ತರಕಾರಿಗಳು ಮತ್ತು ತಾಜಾ ಹಣ್ಣುಗಳನ್ನು ತಿನ್ನಿಸಿದರೆ ರೋಗನಿರೋಧಕ ಶಕ್ತಿ ಚೆನ್ನಾಗಿರುತ್ತದೆ.
ಸರಿಯಾದ ನಿದ್ದೆ : ಆರೋಗ್ಯವಂತ ವಯಸ್ಕರಿಗೆ ಸುಮಾರು 8 ಗಂಟೆಗಳ ನಿದ್ದೆ ಬೇಕು. ಆದ್ರೆ ಮಕ್ಕಳು 10 ರಿಂದ 14 ಗಂಟೆಗಳ ಕಾಲ ಮಲಗಬೇಕೆಂದು ವೈದ್ಯರೇ ಸಲಹೆ ನೀಡುತ್ತಾರೆ. ನವಜಾತ ಶಿಶುಗಳು 15 ಗಂಟೆಗಳ ಕಾಲ ನಿದ್ರಿಸುತ್ತವೆ. ಹಾಗಾಗಿ ಮಕ್ಕಳು ಚೆನ್ನಾಗಿ ನಿದ್ರಿಸುವುದು ಬಹಳ ಅವಶ್ಯಕ.