ಕಳೆದ ಕೆಲವು ದಿನಗಳಿಂದ ರಾಜ್ಯದಾದ್ಯಂತ ವ್ಯಾಪಕ ಮಳೆಯಾಗುತ್ತಿದೆ. ಅದರಲ್ಲೂ ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆ ಆರ್ಭಟ ಜೋರಾಗಿದ್ದು, ಗುಡ್ಡ ಕುಸಿತ, ರಸ್ತೆ ಸಂಪರ್ಕ ಕಡಿತಗೊಂಡ ಘಟನೆಗಳು ನಡೆದಿವೆ. ಈ ಪರಿಸ್ಥಿತಿ ನಡುವೆಯೂ ಪ್ರವಾಸ ಹೋದವರು ಸಂಕಷ್ಟದ ಪರಿಸ್ಥಿತಿ ಎದುರಿಸಿದ್ದಾರೆ.
ಅದರಲ್ಲೂ ಕರಾವಳಿ ಜಿಲ್ಲೆಗಳಲ್ಲಿ ಹಲವಾರು ತೀರ್ಥಕ್ಷೇತ್ರಗಳಿದ್ದು ಭಕ್ತರು ರಜಾ ದಿನಗಳಲ್ಲಿ ಅಲ್ಲಿಗೆ ಭೇಟಿ ನೀಡಲು ಬಯಸುತ್ತಿದ್ದಾರೆ. ಆದರೆ ಬಹುತೇಕ ಎಲ್ಲಾ ಘಾಟಿ ಪ್ರದೇಶಗಳಲ್ಲಿ ಸಂಚಾರ ದುಸ್ತರವಾಗಿದೆ. ಗುಡ್ಡ ಕುಸಿತದಿಂದಾಗಿ ಕೆಲವೊಂದು ಘಾಟಿಗಳಲ್ಲಿ ಸಂಚಾರವೇ ಬಂದ್ ಆಗಿದೆ.
ಇನ್ನು ಮಲೆನಾಡು ಭಾಗದಲ್ಲಿ ಹಲವಾರು ಪ್ರವಾಸಿ ತಾಣಗಳಿದ್ದು ಪ್ರವಾಸ ಪ್ರಿಯರು ಮಳೆಗಾಲದಲ್ಲಿ ಭೇಟಿ ನೀಡುವ ಮುನ್ನ ಎಚ್ಚರ ವಹಿಸುವುದು ಸೂಕ್ತ. ಫಾಲ್ಸ್ ಗಳು ಧುಮ್ಮಿಕ್ಕಿ ಹರಿಯುತ್ತಿರುವ ಕಾರಣ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಮಳೆ ಆರ್ಭಟಿಸುತ್ತಿರುವ ಈ ಸಂದರ್ಭದಲ್ಲಿ ಭಕ್ತರು ಹಾಗೂ ಪ್ರವಾಸಿಗರು ತಮ್ಮ ಭೇಟಿಯನ್ನು ಮುಂದೂಡುವುದು ಸೂಕ್ತ.