ಮಳೆ ಎಲ್ಲರಿಗೂ ಇಷ್ಟ. ಆದ್ರೆ ಮಳೆಗಾಲದಲ್ಲಿ ಅನೇಕ ರೋಗಗಳು ಹಾಗೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮನೆಯಲ್ಲಿರುವ ವಸ್ತುಗಳು ತೇವವಾಗಿ ವಾಸನೆ ಬರಲು ಶುರುವಾಗುತ್ತದೆ. ಮಸಾಲೆ ವಸ್ತುಗಳು ಹಾಳಾಗುತ್ತವೆ. ಇದಕ್ಕೆ ಆತಂಕ ಅಥವಾ ಬೇಸರಪಟ್ಟುಕೊಳ್ಳುವ ಅಗತ್ಯವಿಲ್ಲ. ಕೆಲವೊಂದು ಸಣ್ಣ ಪುಟ್ಟ ಟಿಪ್ಸ್ ನಿಮ್ಮ ಸಮಸ್ಯೆಯನ್ನು ದೂರ ಮಾಡುತ್ತದೆ.
ಮಳೆಗಾಲದಲ್ಲಿ ಹಗುರವಿರುವ ಪರದೆಯನ್ನು ಹಾಕಬೇಕು. ಮಳೆಯ ಕಾರಣಕ್ಕೆ ಪರದೆ ಒದ್ದೆಯಾದ್ರೆ ಸುಲಭವಾಗಿ ತೊಳೆಯಬಹುದು. ಹಗುರವಿರುವ ಪರದೆಗಳು ಬಹುಬೇಗ ಒಣಗುತ್ತವೆ.
ಮಳೆಗಾಲದಲ್ಲಿ ಬಹು ಬೇಗ ಒಣಗುವ ರತ್ನಗಂಬಳಿಯನ್ನು ಬಳಸಬೇಕು.
ಈ ಋತುವಿನಲ್ಲಿ ಬೇರೆ ಬೇರೆ ಕೀಟಾಣುಗಳು ಮನೆಯನ್ನು ಪ್ರವೇಶ ಮಾಡುತ್ತವೆ. ಹಾಗಾಗಿ ಮನೆಯನ್ನು ಸ್ವಚ್ಛಗೊಳಿಸುವ ವೇಳೆ ನೀರಿಗೆ ಹನಿ ಫಿನೈಲ್ ಹಾಕಿ ಕ್ಲೀನ್ ಮಾಡಿ.
ಈ ದಿನಗಳಲ್ಲಿ ಮಸಾಲೆ ಪದಾರ್ಥಗಳು ತೇವವಾಗಿ ಅದ್ರಲ್ಲಿ ಸಣ್ಣ ಸಣ್ಣ ಉಂಡೆಗಳು ಕಾಣಿಸಿಕೊಳ್ಳುತ್ತವೆ. ಮಳೆಗಾಲ ಶುರುವಾಗ್ತಿದ್ದಂತೆ ಮಸಾಲೆ ಪದಾರ್ಥಗಳನ್ನು ಏರ್ ಟೈಟ್ ಪಾತ್ರೆಯಲ್ಲಿ ಹಾಕಿ ಸರಿಯಾಗಿ ಮುಚ್ಚಿಡಿ.
ಆಹಾರ ಸೇವನೆ ಮಾಡುವಾಗ ಅಥವಾ ಕಣ್ಣುಗಳನ್ನು ಮುಟ್ಟಿಕೊಳ್ಳುವ ಮೊದಲು ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಿ. ಮಳೆಗಾಲದಲ್ಲಿ ಸೂಕ್ಷ್ಮ ಜೀವಿಗಳು ಬಹುಬೇಗ ಆಕ್ರಮಣ ಮಾಡುತ್ತವೆ. ಇದ್ರಿಂದ ಅನೇಕ ಖಾಯಿಲೆಗಳು ನಮ್ಮನ್ನು ಕಾಡಲು ಶುರುವಾಗುತ್ತದೆ.