ಉತ್ತರ ಕನ್ನಡಕ್ಕೆ ಒಂದು ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಬೇಕೆಂದು ಅಗ್ರಹಿಸಿ ಇತ್ತೀಚೆಗೆ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಅಭಿಯಾನ ನಡೆಸಲಾಗಿತ್ತು. ಈ ಹಿಂದೆಯೂ ಇಂತವುದೇ ಅಭಿಯಾನ ನಡೆದಿದ್ದಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಆದರೆ ಉಡುಪಿ ಬಳಿ ನಡೆದ ಆಂಬುಲೆನ್ಸ್ ಅಪಘಾತದ ಘಟನೆ ಬಳಿಕ ಉತ್ತರ ಕನ್ನಡ ಜನತೆಯ ಸುಸಜ್ಜಿತ ಆಸ್ಪತ್ರೆ ಬೇಡಿಕೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಜನಪ್ರತಿನಿಧಿಗಳು ಸಹ ಟ್ವಿಟರ್ ಅಭಿಯಾನಕ್ಕೆ ಸ್ಪಂದಿಸಿ ಆಸ್ಪತ್ರೆ ಮಂಜೂರಾತಿಗೆ ಪ್ರಯತ್ನಿಸುವುದಾಗಿ ತಿಳಿಸಿದ್ದರು.
ಇದೀಗ ಈ ಹೋರಾಟ ಮತ್ತೊಂದು ಹಂತ ತಲುಪಿದ್ದು, ಸೋಮವಾರದಂದು ಕಾರವಾರ ನಗರದಲ್ಲಿ 412 ಸಾರ್ವಜನಿಕರು ಸುಸಜ್ಜಿತ ಆಸ್ಪತ್ರೆಗೆ ಮನವಿ ಮಾಡಿ ರಕ್ತದಲ್ಲಿ ಪತ್ರ ಬರೆದು ಪ್ರಧಾನಿ ನರೇಂದ್ರ ಮೋದಿಯವರಿಗೆ ಕಳುಹಿಸಿದ್ದಾರೆ.
85 ವರ್ಷದ ವೃದ್ಧೆ ಅಜ್ಮತ್ ಹಾಗೂ 8 ತಿಂಗಳ ಗರ್ಭಿಣಿ ಪ್ರಶಾಂತಿ ನಾಯಕ್ ಸ್ವಯಂ ಪ್ರೇರಿತವಾಗಿ ರಕ್ತದಲ್ಲಿ ಪತ್ರ ಬರೆಯುವ ಮೂಲಕ ಈ ಚಳವಳಿಗೆ ಚಾಲನೆ ನೀಡಿದ್ದಾರೆ. ಬಳಿಕ ವಿದ್ಯಾರ್ಥಿಗಳು, ವಿವಿಧ ಸಂಘ -ಸಂಸ್ಥೆಗಳ ಪದಾಧಿಕಾರಿಗಳು, ಮಹಿಳೆಯರು ಸೇರಿ 412 ಮಂದಿ ತಮ್ಮ ರಕ್ತದಿಂದ ಪತ್ರ ಬರೆದು ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಮಂಜೂರು ಮಾಡುವಂತೆ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ.