ದುಬೈ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಎಮಿರೇಟ್ಸ್‌ನಲ್ಲಿ ಭೇಟಿ ಮಾಡಿದ ಯುಎಇ ಉಪಾಧ್ಯಕ್ಷ ಮತ್ತು ಪ್ರಧಾನಿ ಮತ್ತು ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು, ಮಲಯಾಳಂನಲ್ಲಿ ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಟ್ವೀಟ್ ಜೊತೆಗೆ, ದುಬೈ ಎಕ್ಸ್‌ಪೋ 2020ರ ಸ್ಥಳದಲ್ಲಿ ವಿಜಯನ್‌ಗೆ ನೀಡಿದ ಸ್ವಾಗತದ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ. ಈ ಟ್ವೀಟ್ ಅನ್ನು ಕೇರಳ ಸಿಎಂ ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ.
ಯುಎಇ ಕೇರಳದೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದೆ. ದುಬೈ ಮತ್ತು ಯುಎಇಯ ಆರ್ಥಿಕ ಮತ್ತು ಅಭಿವೃದ್ಧಿಯ ಬೆಳವಣಿಗೆಯಲ್ಲಿ ಕೇರಳಿಗರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದು ಶೇಖ್ ಮಲಯಾಳಂನಲ್ಲಿ ಟ್ವೀಟ್ ಮಾಡಿದ್ದಾರೆ. ಇತ್ತ ಪಿಣರಾಯಿ ವಿಜಯನ್ ಕೂಡ ಶೇಖ್ ಮೊಹಮ್ಮದ್ ಬಿನ್ ರಶೀದ್ ಅವರಿಗೆ ಅರೇಬಿಕ್ ಭಾಷೆಯಲ್ಲಿ ಟ್ವೀಟ್ ಮಾಡಿ ಧನ್ಯವಾದ ಅರ್ಪಿಸಿದ್ದಾರೆ. ಕೇರಳದ ಅಭಿವೃದ್ಧಿಯಲ್ಲಿ ದುಬೈನ ಬೆಂಬಲಕ್ಕಾಗಿ ಶೇಕ್ ಮೊಹಮ್ಮದ್ ಬಿನ್ ರಶೀದ್ ಅವರಿಗೆ ಸಿಎಂ ಧನ್ಯವಾದ ತಿಳಿಸಿದ್ದಾರೆ.
ಕೇರಳದ ಕೈಗಾರಿಕಾ ಸಚಿವ ಪಿ.ರಾಜೀವ್, ಭಾರತೀಯ ರಾಯಭಾರಿ ಸಂಜಯ್ ಸುಧೀರ್, ಕಾನ್ಸುಲ್ ಜನರಲ್ ಅಮನ್ ಪುರಿ ಮತ್ತು ಲುಲು ಗ್ರೂಪ್‌ನ ಅಧ್ಯಕ್ಷರು ಮತ್ತು ಅಬುಧಾಬಿ ಚೇಂಬರ್‌ನ ಉಪಾಧ್ಯಕ್ಷ ಯೂಸುಫ್ ಅಲಿ ಎಂ.ಎ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.