ಆಪಲ್ ಕಂಪನಿಯ ಉತ್ಪನ್ನಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಐಫೋನ್, ಟ್ಯಾಬ್ಲೆಟ್‌ಗಳು, ಲ್ಯಾಪ್‌ಟಾಪ್, ಇಯರ್‌ಪಾಡ್, ಆಪಲ್ ಕಂಪನಿಯ ಸ್ಮಾರ್ಟ್ ವಾಚ್‌ಗಳು ಮನೆಮಾತಾಗಿವೆ.
ಸದ್ಯದಲ್ಲೇ ಆಪಲ್ ಕಂಪನಿ ಆಟೋಮೊಬೈಲ್ ಕ್ಷೇತ್ರಕ್ಕೆ ಕಾಲಿಡಲು ಸಿದ್ಧತೆ ಮಾಡಿಕೊಳ್ತಾ ಇದೆ. ಮೂಲಗಳ ಪ್ರಕಾರ ಆಪಲ್ ಕಂಪನಿ, ಎಲೆಕ್ಟ್ರಿಕಲ್ ವಾಹನವನ್ನು ಸಿದ್ಧಪಡಿಸುತ್ತಿದೆ.
ಆ ಕಾರು ನಿಖರವಾಗಿ ಟೆಸ್ಲಾದಂತೆಯೇ ಇರಲಿದೆಯಂತೆ. ಕಾರನ್ನು ಕೆಲವೇ ಕೆಲವು ಮಾರುಕಟ್ಟೆಗಳಿಗಾಗಿ ವಿನ್ಯಾಸಗೊಳಿಸಲಾಗುವುದು. ಅಂದರೆ ಎಲ್ಲಾ ದೇಶಗಳಲ್ಲೂ ಆಪಲ್ ಕಾರು ಲಭ್ಯವಾಗುತ್ತದೆ ಎಂಬ ಬಗ್ಗೆ ಖಚಿತತೆಯಿಲ್ಲ. ಆಪಲ್‌ನ ಕಾರು ಮರ್ಸಿಡಿಸ್ ಮತ್ತು ಜಿಎಂ ಹಮ್ಮರ್ ಇವಿಗಿಂತ ಅಗ್ಗವಾಗಿರಲಿದೆಯಂತೆ. ಹಾಗಾಗಿ ಇದು ಟೆಸ್ಲಾ ಮತ್ತು ಮರ್ಸಿಡಿಸ್‌ಗೆ ಪೈಪೋಟಿ ನೀಡಲಿದೆ. ಆಪಲ್ ಸ್ವಯಂ ಚಾಲಿತ ಕಾರನ್ನು ಬಿಡುಗಡೆ ಮಾಡುವ ಯೋಜನೆಯನ್ನು ವಿಳಂಬಗೊಳಿಸಿದೆ. ಹಾಗಾಗಿ ಕಂಪನಿ 2026 ರಲ್ಲಿ ಕಾರನ್ನು ಲಾಂಚ್ ಮಾಡಲು ಯೋಜನೆ ರೂಪಿಸಿದೆಯಂತೆ.
ಕಂಪನಿ ಸುಮಾರು 8 ವರ್ಷಗಳ ಹಿಂದೆ ಸ್ವಯಂ ಚಾಲಿತ ಕಾರು ತಯಾರಿಸಲು ಮುಂದಾಗಿತ್ತು. ಈ ಕಾರಿನ ಬೆಲೆ 1 ಲಕ್ಷ ಡಾಲರ್ ಅಂದ್ರೆ ಸುಮಾರು 81 ಲಕ್ಷ ರೂಪಾಯಿ ಇರಲಿದೆ ಎನ್ನಲಾಗುತ್ತಿತ್ತು. ಆಪಲ್ ಕಾರಿನಲ್ಲಿ ಸ್ಟೀರಿಂಗ್ ವೀಲ್ ಮತ್ತು ಪೆಡಲ್ ಇರುವುದಿಲ್ಲ ಎಂಬ ಸುದ್ದಿ ಈ ಹಿಂದೆ ಇತ್ತು. ಆದರೆ ಕಂಪನಿಯು ಅಂತಹ ಯಾವುದೇ ಯೋಜನೆಯನ್ನು ಹೊಂದಿಲ್ಲ. ಕಂಪನಿಯು ಕಾರಿನ ವಿನ್ಯಾಸದಲ್ಲಿ ವಿಭಿನ್ನವಾಗಿ ಏನನ್ನೂ ಮಾಡುವುದಿಲ್ಲ. ಕಾರು ಸ್ಟೀರಿಂಗ್ ಚಕ್ರ ಮತ್ತು ಪೆಡಲ್ಗಳನ್ನು ಹೊಂದಿರುತ್ತದೆ.
ಈ ಹಿಂದೆ ಆಪಲ್ ಕಾರಿನ ಬೆಲೆ 1.2 ಲಕ್ಷ ಡಾಲರ್ ಎಂದು ವರದಿಗಳು ಬಂದಿದ್ದವು. ಆದರೆ ಈ ಕಾರಿನ ಬೆಲೆ 1 ಲಕ್ಷ ಡಾಲರ್ ಸಮೀಪವಿರಲಿದೆ ಎಂಬ ಮಾಹಿತಿಯಿದೆ. ಆದರೆ ಕಂಪನಿ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಲು ಯೋಜಿಸುತ್ತಿದೆಯಂತೆ. 2026 ರಲ್ಲಿ ಆಪಲ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬಹುದು. ಕಾರಿನಲ್ಲಿ ಆಪಲ್ ಸಿಲಿಕಾನ್ ಚಿಪ್‌ಸೆಟ್ ಬಳಸುವ ನಿರೀಕ್ಷೆಯಿದೆ.