ಮಮತಾ ಬ್ಯಾನರ್ಜಿ ದೇವಿಯಂತೆ, ಪ್ರಧಾನಿಯನ್ನು ಮಹಿಷಾಸುರನಂತೆ ಬಿಂಬಿಸಿದ ಪೋಸ್ಟರ್ ವಿರುದ್ಧ ಹೆಚ್ಚಿದ ಆಕ್ರೋಶ..! 18-02-2022 4:39PM IST / No Comments / Posted In: Latest News, India, Live News ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿಯನ್ನು ದುರ್ಗಾದೇವಿಯಂತೆ ಹಾಗೂ ಪ್ರಧಾನಿ ಮೋದಿಯನ್ನು ಮಹಿಷಾಸುರನಂತೆ ಬಿಂಬಿಸುವ ಪೋಸ್ಟರ್ ಒಂದು ಭಾರೀ ವಿವಾದಕ್ಕೆ ಕಾರಣವಾಗಿದೆ. ಇದು ಪ್ರಧಾನಿ ಮೋದಿಗೆ ಹಾಗೂ ಸನಾತನ ಧರ್ಮಕ್ಕೆ ಮಾಡಿದ ಅವಮಾನ ಎಂದಿರುವ ಬಿಜೆಪಿ ನಾಯಕರು ಈ ವಿಚಾರವಾಗಿ ನಾವು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯಲ್ಲಿ ಇಂತಹದ್ದೊಂದು ಪೋಸ್ಟರ್ನ್ನು ಅಳವಡಿಸಲಾಗಿದೆ. ಟಿಎಂಸಿ ನಾಯಕಿ ಅನಿಮಾ ಸಾಹಾ ಈ ಜಿಲ್ಲೆಯ ವಾರ್ಡ್ ನಂಬರ್ 1ರಿಂದ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಪೋಸ್ಟರ್ನಲ್ಲಿ ಮಮತಾ ಬ್ಯಾನರ್ಜಿಯನ್ನು ದುರ್ಗಾ ಮಾತೆಯಂತೆ ಹಾಗೂ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಮಹಿಷಾಸುರರಂತೆ ಚಿತ್ರಿಸಲಾಗಿದೆ. ಇದೇ ಪೋಸ್ಟರ್ನಲ್ಲಿ ಉಳಿದ ಪಕ್ಷಗಳ ಚಿಹ್ನೆಗಳನ್ನು ಕುರಿಗಳ ಮೇಲೆ ಮುದ್ರಿಸಲಾಗಿದ್ದು ಅದರ ಮೇಲೆ ಯಾರಾದರೂ ವಿರೋಧ ಪಕ್ಷಗಳಿಗೆ ಮತ ಹಾಕಿದರೆ ಅವರೂ ಬಲಿಯಾಗುತ್ತಾರೆ ಎಂದು ಬರೆಯಲಾಗಿದೆ. ಈ ಪೋಸ್ಟರ್ ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ಮಾತನಾಡಿದ ಬಿಜೆಪಿ ಸ್ಥಳೀಯ ನಾಯಕ ವಿಪುಲ್ ಆಚಾರ್ಯ, ರಾಜಕೀಯ ನಾಯಕರನ್ನು ಈ ರೀತಿ ದೇವರಂತೆ ಬಿಂಬಿಸುವುದು ಸನಾತನ ಧರ್ಮಕ್ಕೆ ಮಾಡಿದ ಅವಮಾನವಾಗಿದೆ. ಅಲ್ಲದೇ ಇದು ದೇಶದ ಪ್ರಧಾನಿ ಹಾಗೂ ಗೃಹ ಸಚಿವರನ್ನೂ ಅವಮಾನಿಸುವಂತಿದೆ ಎಂದು ಕಿಡಿಕಾರಿದ್ದಾರೆ. ಈ ನಡುವೆ ಟಿಎಂಸಿ ನಾಯಕಿ ಅನಿಮಾ ಸಾಹಾ, ನನಗೆ ಈ ಪೋಸ್ಟರ್ ಯಾರು ಅಳವಡಿಸಿದ್ದಾರೆ ಎಂಬುದೇ ತಿಳಿದಿಲ್ಲ ಎಂದು ಹೇಳಿದ್ದಾರೆ. ನನಗೆ ಈ ಬಗ್ಗೆ ಮೊದಲೇ ತಿಳಿದಿದ್ದರೆ ನಾನು ಇಂತಹ ಪೋಸ್ಟರ್ಗಳನ್ನು ಅಳವಡಿಸಲು ಅವಕಾಶವನ್ನೇ ಮಾಡಿಕೊಡುತ್ತಿರಲಿಲ್ಲ ಎಂದಿದ್ದಾರೆ.