ಎರಡು ಕುಟುಂಬಗಳ ನಾಲ್ವರು ಮಕ್ಕಳು ಮಿಠಾಯಿಯನ್ನು ಸೇವಿಸಿ ಮೃತಪಟ್ಟ ಘಟನೆಯು ಉತ್ತರ ಪ್ರದೇಶದ ಕುಷಿನಗರದಲ್ಲಿ ಸಂಭವಿಸಿದೆ. ಈ ಘಟನೆಯಲ್ಲಿ ಇಬ್ಬರು ಬಾಲಕರು ಹಾಗೂ ಇಬ್ಬರು ಬಾಲಕಿಯರು ಮೃತಪಟ್ಟಿದ್ದು ಮನೆ ಮುಂದೆ ಯಾರೋ ಅಪರಿಚಿತರು ಇಟ್ಟಿದ್ದ ಮಿಠಾಯಿ ತಿಂದು ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮಿಠಾಯಿಯ ಜೊತೆಯಲ್ಲಿ ಹಣ ಕೂಡ ಇಡಲಾಗಿತ್ತು ಎಂದು ತಿಳಿದುಬಂದಿದೆ.
ಮೃತಪಟ್ಟ ಮಕ್ಕಳ ಕುಟುಂಬಸ್ಥರು ನೀಡಿರುವ ಮಾಹಿತಿಯ ಪ್ರಕಾರ, ಹಿರಿಯ ಮಗು ಮನೆಯ ಹೊರಗಿದ್ದ ಮಿಠಾಯಿಯನ್ನು ಎತ್ತಿಕೊಂಡಿತು. ಹಾಗೂ ಉಳಿದ ಮೂವರು ಮಕ್ಕಳಿಗೆ ನೀಡಿದೆ. ಇವರೆಲ್ಲ ಮಿಠಾಯಿ ಸೇವಿಸುತ್ತಿದ್ದಂತೆಯೇ ಮಕ್ಕಳು ಅನಾರೋಗ್ಯಕ್ಕೀಡಾಗಿದ್ದಾರೆ. ಕೂಡಲೇ ಮಕ್ಕಳನ್ನು ಆಸ್ಪತ್ರೆಗೆ ಸಾಗಿಸಲಾಯ್ತಾದರೂ ನಾಲ್ವರು ಮಕ್ಕಳು ಮೃತಪಟ್ಟಿದ್ದಾರೆ.
ಮೃತಪಟ್ಟ ಮಕ್ಕಳು ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದಾರೆ ಎನ್ನಲಾಗಿದೆ. ಈ ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆದೇಶ ನೀಡಿದ್ದಾರೆ.