ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಬಿಜೆಪಿ ಕಚೇರಿ ಎದುರು ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮನೆ ಬಾಡಿಗೆ ವಿಚಾರದಲ್ಲಿ ಮಾಲೀಕನ ಜೊತೆಗಿನ ಜಟಾಪಟಿಯಿಂದ ಮನನೊಂದು, ಬಿಜೆಪಿ ಕಚೇರಿ ಎದುರಲ್ಲೇ ಮೈಗೆ ಬೆಂಕಿ ಹಚ್ಚಿಕೊಂಡಿದ್ದಾನೆ.
ರಾತ್ರಿ 9.30ರ ಸುಮಾರಿಗೆ ಈ ಘಟನೆ ನಡೆದಿದೆ. 50 ವರ್ಷದ ಬಲರಾಮ್ ತಿವಾರಿ ಎಂಬ ವ್ಯಕ್ತಿ ಬಿಜೆಪಿ ಕಚೇರಿ ಪ್ರವೇಶಿಸಿ ತನ್ನ ಮೈಗೆ ಬೆಂಕಿ ಹಚ್ಚಿಕೊಂಡಿದ್ದಾನೆ. ಆದರೆ ಒಳಬರುವ ಮುನ್ನವೇ ಕಚೇರಿಯ ಬಾಗಿಲಲ್ಲಿ ಕುಳಿತಿದ್ದ ಭದ್ರತಾ ಸಿಬ್ಬಂದಿ ಆತನನ್ನು ತಡೆದಿದ್ದಾರೆ. ಆತನ ದೇಹ ಸುಮಾರು ಶೇ.40-45ರಷ್ಟು ಸುಟ್ಟು ಹೋಗಿದ್ದು, ಪೊಲೀಸರು ಶ್ಯಾಮ ಪ್ರಸಾದ್ ಮುಖರ್ಜಿ ಸಿವಿಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಲರಾಮ್ ತಿವಾರಿ ಠಾಕೂರ್ಗಂಜ್ ಪ್ರದೇಶದಲ್ಲಿರುವ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾನೆ. 6 ತಿಂಗಳ ಹಿಂದೆ ಬಲರಾಮ್ ತಿವಾರಿ ಕೆಲಸ ಕಳೆದುಕೊಂಡಿದ್ದ. ಇದರಿಂದಾಗಿ ಕುಟುಂಬದ ಆರ್ಥಿಕ ಸ್ಥಿತಿ ಇನ್ನಷ್ಟು ಹದಗೆಟ್ಟಿತ್ತು. ಮನೆ ಬಾಡಿಗೆ ಕಟ್ಟಲು ಆತನ ಬಳಿ ಹಣವಿರಲಿಲ್ಲ. ಆದ್ರೆ ಮನೆ ಮಾಲೀಕ ಬಾಡಿಗೆ ಕೊಡುವಂತೆ ಪೀಡಿಸುತ್ತಿದ್ದ. ತಿವಾರಿ ಕುಟುಂಬಕ್ಕೆ ಮಾನಸಿಕ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ತಿವಾರಿ ಪೊಲೀಸರಿಗೆ ದೂರು ನೀಡಿದ್ರೂ ಪ್ರಯೋಜನವಾಗಿರಲಿಲ್ಲ. ಮನನೊಂದ ಆತ ಬಿಜೆಪಿ ಕಚೇರಿ ಎದುರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.