
ಇದೀಗ ಚಿರತೆಯೊಂದು ಮನೆಯ ಗೇಟ್ ಹಾರಿ ಸಾಕು ನಾಯಿಯನ್ನು ಹಿಡಿದಿರುವ ಆಘಾತಕಾರಿ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಮೈಜುಮ್ಮೆನ್ನುವ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ. ವಿಡಿಯೋದಲ್ಲಿ, ಸಾಕು ನಾಯಿ ಮನೆಯ ಮುಂದೆ ನಿಂತು ಬೊಗಳುತ್ತಿದೆ. ನಂತರ ಗೇಟ್ ಹತ್ತಿರ ಹೋಗಿ, ವೇಗವಾಗಿ ಹಿಂದಕ್ಕೆ ಓಡುತ್ತದೆ. ಈ ವೇಳೆ ಗೇಟ್ ಅನ್ನು ಹಾರಿ ಬಂದ ಚಿರತೆ ನಾಯಿಯ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದು, ಕತ್ತಲೆಯಲ್ಲಿ ಕಣ್ಮರೆಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋವನ್ನು 52,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಗುಡ್ಡಗಾಡು ಪ್ರದೇಶಗಳು ಸೇರಿದಂತೆ ಹಲವು ಪ್ರದೇಶಗಳಲ್ಲಿ ಚಿರತೆಗಳು ಸಾಮಾನ್ಯವಾಗಿ ನಾಯಿಗಳನ್ನು ಬೇಟೆಯಾಡುತ್ತವೆ. ಆದ್ದರಿಂದ, ಕೆಲವು ಜನರು ತಮ್ಮ ಸಾಕುಪ್ರಾಣಿಗಳ ಕುತ್ತಿಗೆಗೆ ಕಬ್ಬಿಣದ ಕಾಲರ್ ಕಟ್ಟುತ್ತಾರೆ. ಇದರಿಂದ ಶ್ವಾನಗಳ ಜೀವ ಉಳಿಯುತ್ತದೆ ಎಂದು ಕಸ್ವನ್ ಟ್ವೀಟ್ ಮಾಡಿದ್ದಾರೆ.
ಮಧ್ಯಪ್ರದೇಶದ ಛತ್ತರ್ಪುರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ನಾಯಿಯ ದುಸ್ಥಿತಿಯನ್ನು ಕಂಡ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಕೆಲವು ಬಳಕೆದಾರರು ನಾಯಿಯನ್ನು ಮನೆಯಿಂದ ಹೊರಗೆ ಇಡುವುದು ಸರಿಯೇ ಎಂಬ ಚರ್ಚೆಯಲ್ಲಿ ತೊಡಗಿದ್ದಾರೆ.