ದೆಹಲಿಯ ಹರಿನಗರ ಪ್ರದೇಶದ ಫ್ಲಾಟ್ ಒಂದರಲ್ಲಿ 75 ವರ್ಷದ ಮಹಿಳೆಯನ್ನು ಕೊಲೆ ಮಾಡಿದ ಆರೋಪದ ಮೇಲೆ ಮನೆಕೆಲಸದವ ಹಾಗೂ ಆತನ ಇಬ್ಬರು ಸಹವರ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೇ 31ರಂದು ಮನೆಯೊಡತಿ ಸಾವಿತ್ರಿ ಶರ್ಮಾ ಕೊಲೆ ಯತ್ನ ನಡೆದಿದ್ದು, ಜೂನ್ 1ರಂದು ಅವರನ್ನು ಆರ್ಕಿಡ್ ಆಸ್ಪತ್ರೆಯಲ್ಲಿ ದಾಖಲಿಸಿದ್ದ ವೇಳೆ ಪೊಲೀಸರಿಗೆ ಘಟನೆಯ ವಿಚಾರ ತಿಳಿದಿದೆ.
“ಪ್ರಜ್ಞಾಶೂನ್ಯ ಸ್ಥಿತಿಯಲ್ಲಿದ್ದ ಸಾವಿತ್ರಿ ಹೇಳಿಕೆ ಕೊಡಲು ಶಕ್ತರಾಗಿಲ್ಲ ಎಂದು ಅವರ ಆರೈಕೆ ಮಾಡುತ್ತಿದ್ದ ವೈದ್ಯರು ಘೋಷಿಸಿದರು. ಆದರೆ ಮೇಲು ನೋಟಕ್ಕೆ, ಆಕೆಯ ಕುತ್ತಿಗೆ ಮೇಲೆ ಗುರುತುಗಳು ಕಂಡು ಬಂದ ಕಾರಣ ಇದೊಂದು ಕೊಲೆ ಯತ್ನ ಎಂದು ಕಂಡುಬಂದಿದೆ. ಹೀಗಾಗಿ ಪ್ರಕರಣ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಸಂದರ್ಭದಲ್ಲಿಯೇ ಸಾವಿತ್ರಿ ಕೊನೆಯುಸಿರೆಳೆದಿದ್ದಾರೆ,” ಎಂದು ಪೊಲೀಸರು ತಿಳಿಸಿದ್ದಾರೆ.
ಸಾವಿತ್ರಿ ಶರ್ಮಾ ಹಾಗೂ ಅವರ ಪತಿ ಜೈಪಾಲ್ ಕ್ಯಾನ್ಸರ್ ಪೀಡಿತರಾಗಿದ್ದು, ಮಾನಸಿಕ ಆರೋಗ್ಯದ ಸಮಸ್ಯೆಗಳನ್ನೂ ಹೊಂದಿದ್ದರು.
“ಅವರು ಇತ್ತಿಚೆಗೆ ತಮ್ಮನ್ನು ನೋಡಿಕೊಳ್ಳಲು ಮೋನು ಎಂಬ ಶುಶ್ರೂಷಕನನ್ನು ನೇಮಿಸಿಕೊಂಡಿದ್ದರು. ಆತ ಪದೇ ಪದೇ ತನ್ನ ಹೇಳಿಕೆಗಳನ್ನು ಬದಲಿಸುತ್ತಿರುವ ಕಾರಣ ಆತನ ಮೇಲಿನ ಅನುಮಾನ ಬಲವಾಗುತ್ತಲೇ ಇದೆ. ತಾಂತ್ರಿಕ ಸರ್ವೇಕ್ಷಣೆಯ ನೆರವಿನಿಂದ, ಘಟನೆ ನಡೆದ ದಿನದಂದು ಮೋನು ಕೆಲವೊಂದು ಅನಾಮಿಕ ವ್ಯಕ್ತಿಗಳೊಂದಿಗೆ ಬಂದು ಅಲ್ಲಿಂದ ಹರಿಬರಿಯಲ್ಲಿ ಕೆಲವೇ ಕ್ಷಣಗಳ ಬಳಿಕ ಹೊರಟುಹೋಗಿರುವುದು ಕಂಡುಬಂದಿದೆ,” ಎಂದು ಪೊಲೀಸರು ತಿಳಿಸಿದ್ದಾರೆ.
“ಸಹವರ್ತಿಗಳಾದ ವಿಶಾಲ್ ಹಾಗೂ ನವೀನ್ ಜೊತೆಗೆ ಸೇರಿಕೊಂಡು ಮೋನು, ಸುಲಭ ಗುರಿಯಾದ ಮಹಿಳೆ ಹಾಗೂ ಆಕೆಯ ಪತಿಯ ಮನೆಯನ್ನು ಲೂಟಿ ಮಾಡಲು ಸಂಚು ರೂಪಿಸಿದ್ದ,” ಎಂದು ಪೊಲೀಸ್ ಹೇಳಿಕೆಯಿಂದ ತಿಳಿದುಬಂದಿದೆ.