ಕಳೆದ ರಾತ್ರಿ ದುಷ್ಕರ್ಮಿಗಳಿಂದ ಹತ್ಯೆಗೊಳಗಾಗಿದ್ದ ಪ್ರವೀಣ್ ಅವರ ಅಂತ್ಯಕ್ರಿಯೆಯನ್ನು ಅವರ ಸ್ವಗ್ರಾಮ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ನೆಟ್ಟಾರುವಿನಲ್ಲಿ ನೆರವೇರಿಸಲಾಗಿದೆ. ಈ ವೇಳೆ ನೆರೆದಿದ್ದ ಸಾವಿರಾರು ಮಂದಿ ತಮ್ಮ ಅಂತಿಮ ನಮನ ಸಲ್ಲಿಸಿದ್ದಾರೆ.
ಮೂರು ವರ್ಷಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಪ್ರವೀಣ್ ನೆಟ್ಟಾರು, ಸುಂದರವಾದ ಮನೆಯೊಂದನ್ನು ಕಟ್ಟಿಸಿಕೊಳ್ಳಲು ಚಿಂತನೆ ನಡೆಸಿದ್ದು, ಇದಕ್ಕಾಗಿ ತಮ್ಮ ಜಾಗವನ್ನು ಸಮತಟ್ಟುಗೊಳಿಸಿದ್ದರು ಎನ್ನಲಾಗಿದೆ. ಇದೀಗ ಅದೇ ಜಾಗದಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.
ಪ್ರವೀಣ್ ಅಂತ್ಯಕ್ರಿಯೆ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಅವರು ರೋಧಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಇದರ ಮಧ್ಯೆ ಉದಯ್ಪುರದಲ್ಲಿ ಹತ್ಯೆಗೀಡಾದ ಕನ್ಹಯ್ಯ ಲಾಲ್ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಖಂಡಿಸಿದ್ದ ಪ್ರವೀಣ್, ಈ ಕೃತ್ಯವನ್ನು ನೀವೇಕೆ ಪ್ರಶ್ನಿಸುವುದಿಲ್ಲವೆಂದು ಕೆಲವೊಬ್ಬರ ಹೆಸರನ್ನು ಪ್ರಸ್ತಾಪಿಸಿ ಬರೆದುಕೊಂಡಿದ್ದರು. ಈ ಪೋಸ್ಟ್ ಈಗ ವೈರಲ್ ಆಗಿದೆ.