ಮನೆಯಲ್ಲಿ ಸಾಂಬಾರು, ರಸಂ ಮಾಡುವಾಗ ಎಲ್ಲದಕ್ಕೂ ಕೊತ್ತಂಬರಿಸೊಪ್ಪಿನ ಬಳಕೆ ಮಾಡುತ್ತೇವೆ. ಅಂಗಡಿಯಿಂದ ತಂದು ಇಟ್ಟಿದ್ದು ನಾಳೆ ಬೆಳಿಗ್ಗೆಯೊಳಗೆ ಕೊತ್ತಂಬರಿಸೊಪ್ಪು ಬಾಡಿ ಹೋಗುತ್ತದೆ. ಇದು ಹೊರಗಡೆ ಇಟ್ಟುರೂ ತಾಜಾವಾಗಿ ಇರುವುದಿಲ್ಲ, ಫ್ರಿಡ್ಜ್ ನಲ್ಲಿಟ್ಟರೂ ಬಾಡಿ ಹೋಗುತ್ತದೆ ಎಂಬುದು ಎಲ್ಲರ ಗೋಳು. ಹಾಗಾಗಿ ಮನೆಯಲ್ಲಿ ಸುಲಭವಾಗಿ ಕೊತ್ತಂಬರಿಸೊಪ್ಪನ್ನು ಬೆಳೆಸಬಹುದು. ಈ ವಿಧಾನ ಅನುಸರಿಸಿ ಸುಲಭವಾಗಿ ಕೊತ್ತಂಬರಿಸೊಪ್ಪು ನಿಮ್ಮ ಮನೆಯಲ್ಲಿ ಬೆಳೆಯಿರಿ.
ಮೊದಲಿಗೆ ಒಂದು ಹಿಡಿಯಷ್ಟು ಕೊತ್ತಂಬರಿ ಬೀಜ ತೆಗೆದುಕೊಂಡು ಒಂದು ಕಲ್ಲಿನ ಸಹಾಯದಿಂದ ಜಜ್ಜಿಕೊಳ್ಳಿ. ಈ ಕೊತ್ತಂಬರಿ ಬೀಜ ಎರಡು ಭಾಗವಾಗಬೇಕು. ನಂತರ ಒಂದು ಬೌಲ್ ನೀರಿನಲ್ಲಿ ರಾತ್ರಿಯಿಡೀ ಇದನ್ನು ನೆನೆಸಿಡಿ. ಬೆಳಿಗ್ಗೆ ಒಂದು ಅಗಲವಾದ ಪಾಟ್ ತೆಗೆದುಕೊಂಡು ಅದರ ಕೆಳಭಾಗದಲ್ಲಿ ಚಿಕ್ಕ ಚಿಕ್ಕ ತೂತುಗಳನ್ನು ಮಾಡಿಕೊಂಡು ಪಾಟ್ ನ ತಳಭಾಗಕ್ಕೆ 4-5 ಹದ ಗಾತ್ರದ ಕಲ್ಲಿನ ತುಂಡುಗಳನ್ನು ಹಾಕಿ. ಇದು ಪಾಟ್ ನಲ್ಲಿರುವ ಮಣ್ಣು ಕೆಳಗೆ ಹೋಗದಂತೆ ತಡೆಯುತ್ತದೆ.
ನಂತರ 70% ನಷ್ಟು ಮಣ್ಣು, 30% ನಷ್ಟು ಆರ್ಗ್ಯಾನಿಕ್ ಕಂಪೋಸ್ಟ್ ಅನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಪಾಟ್ ಗೆ ಹಾಕಿ. ನಂತರ ನೆನೆಸಿಟ್ಟುಕೊಂಡ ಕೊತ್ತಂಬರಿ ಬೀಜವನ್ನು ಎಲ್ಲಾ ಕಡೆ ಚೆನ್ನಾಗಿ ಉದುರಿಸಿ ಅದರ ಮೇಲೆ ಸ್ವಲ್ಪ ಮಣ್ಣನ್ನು ಉದುರಿಸಿ. ಸ್ವಲ್ಪ ನೀರು ಸಿಂಪಡಿಸಿ. ದಿನಾ ಸ್ವಲ್ಪ ಸ್ವಲ್ಪವೇ ನೀರು ಹಾಕಿ. 21 ದಿನದಲ್ಲಿ ತಾಜಾವಾಗಿರುವ ಕೊತ್ತಂಬರಿಸೊಪ್ಪು ನಿಮ್ಮ ಮನೆಯ ಹಿತ್ತಲಿನಲ್ಲಿ ನಳನಳಿಸುತ್ತದೆ.