ಮನೆಯ ಸುರಕ್ಷತೆಗೆ ಬೀಗ ಅತ್ಯವಶ್ಯಕ. ಯಾವುದೇ ಮನೆಯಿರಲಿ, ಅಂಗಡಿಯಿರಲಿ ಇಲ್ಲ ದೇವಸ್ಥಾನವಿರಲಿ. ಎಲ್ಲ ಕಡೆ ಬಾಗಿಲು. ಅದಕ್ಕೊಂದು ಬೀಗ ಇದ್ದೇ ಇರುತ್ತದೆ. ಮನೆ ಬಾಗಿಲು ಭದ್ರವಾಗಿದ್ದರೆ ಮಾತ್ರ ನಮಗೆ ಸುರಕ್ಷತೆಯ ಭಾವನೆ ಬರುತ್ತದೆ. ವಾಸ್ತು ಶಾಸ್ತ್ರದಲ್ಲಿಯೂ ಬೀಗಕ್ಕೆ ಮಹತ್ವದ ಸ್ಥಾನ ನೀಡಲಾಗಿದೆ. ವಾಸ್ತು ಶಾಸ್ತ್ರದಲ್ಲಿ ಹೇಳಿದಂತೆ ಬೀಗದ ನಿಯಮ ಪಾಲಿಸಿದ್ರೆ ಮನೆ ಮತ್ತಷ್ಟು ಸುರಕ್ಷಿತವಾಗುವ ಜೊತೆಗೆ ಯಾವುದೇ ನಷ್ಟವುಂಟಾಗುವುದಿಲ್ಲ.
ಬೀಗಕ್ಕೂ ದಿಕ್ಕಿಗೂ ಸಂಬಂಧವಿದೆ. ಪೂರ್ವ ದಿಕ್ಕು ಸೂರ್ಯನ ದಿಕ್ಕಾಗಿದೆ. ಈ ದಿಕ್ಕಿಗೆ ಸದಾ ತಾಮ್ರದ ಬೀಗ ಹಾಕಬೇಕು. ಪಶ್ಚಿಮ ದಿಕ್ಕು ಶನಿಯ ದಿಕ್ಕಾಗಿದೆ. ಆ ದಿಕ್ಕಿಗೆ ಕಬ್ಬಿಣದ ಹಾಗೂ ಗಟ್ಟಿಯಾದ ಬೀಗ ಹಾಕಬೇಕು. ಬೀಗದ ಬಣ್ಣ ಕಪ್ಪಾಗಿದ್ದರೆ ಇನ್ನೂ ಉತ್ತಮ. ಅಪ್ಪಿತಪ್ಪಿಯೂ ಪಶ್ಚಿಮ ದಿಕ್ಕಿಗೆ ತಾಮ್ರದ ಬೀಗವನ್ನು ಹಾಕಬಾರದು.
ವಾಸ್ತು ಶಾಸ್ತ್ರದ ಪ್ರಕಾರ, ಉತ್ತರ ದಿಕ್ಕಿಗೆ ಹಿತ್ತಾಳೆ ಬೀಗವನ್ನು ಹಾಕಬೇಕು. ಬೀಗದ ಬಣ್ಣ ಬಂಗಾರದ ಬಣ್ಣದ್ದಾಗಿರಬೇಕು. ದಕ್ಷಿಣ ದಿಕ್ಕಿಗೆ ಪಂಚಲೋಹದ ಹಾಗೂ ಬಿಗಿಯಾದ ಬೀಗವನ್ನು ಹಾಕಬೇಕು.
ಬೀಗ ಎಂದೂ ಶಬ್ಧ ಬರದಂತೆ ನೋಡಿಕೊಳ್ಳಿ. ಆಗಾಗ ತೈಲವನ್ನು ಹಾಕಿ ಬೀಗವನ್ನು ಸರಿಯಾಗಿಟ್ಟುಕೊಳ್ಳಿ. ಶಬ್ಧ ಮಾಡುವ ಬೀಗವನ್ನು ಹೊರಗೆ ಎಸೆಯಬೇಕು. ಮನೆಯಿಂದ ಹೊರಗೆ ಎಸೆಯುವ ವೇಳೆ ಬೀಗ ಮುಚ್ಚಿರಬಾರದು. ಹಾಗೆ ದೇವರ ಮನೆಗೆ ಎಂದೂ ಬೀಗ ಹಾಕಬಾರದು.