ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು ಮೇ 10 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 13ರಂದು ಫಲಿತಾಂಶ ಹೊರಬೀಳಲಿದ್ದು, ರಾಜ್ಯದ ಚುಕ್ಕಾಣಿ ಯಾರ ಕೈಗೆ ಸಿಗಲಿದೆ ಎಂಬ ಲೆಕ್ಕಾಚಾರಕ್ಕೆ ತೆರೆ ಬೀಳಲಿದೆ.
ಇದರ ಮಧ್ಯೆ ಮತದಾನ ಕುರಿತಂತೆ ಕೇಂದ್ರ ಚುನಾವಣಾ ಆಯೋಗ ಮಹತ್ವದ ತೀರ್ಮಾನ ಒಂದನ್ನು ಕೈಗೊಂಡಿದ್ದು, 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ತಮ್ಮ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಿಕೊಡಲು ತೀರ್ಮಾನಿಸಲಾಗಿತ್ತು.
ಆದರೆ ಕಾಂಗ್ರೆಸ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಮನೆಯಿಂದ ಮತದಾನ ಮಾಡಲು ಅವಕಾಶ ಕಲ್ಪಿಸಿದರೆ, ಇದು ಅಕ್ರಮಕ್ಕೆ ಆಸ್ಪದ ಕೊಡುವ ಸಾಧ್ಯತೆ ಇದೆ. ಹೀಗಾಗಿ ಕೇಂದ್ರ ಚುನಾವಣಾ ಆಯೋಗ ಇದನ್ನು ಮರುಪರಿಶೀಲಿಸುವಂತೆ ಕೋರಿದೆ.
ವಿಧಾನ ಪರಿಷತ್ ಸದಸ್ಯ ಪಿ.ಆರ್. ರಮೇಶ್ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳನ್ನು ಬುಧವಾರದಂದು ಭೇಟಿ ಮಾಡಿ ಆಯೋಗದ ನಿರ್ಧಾರ ಮರು ಪರಿಶೀಲಿಸುವಂತೆ ಕೋರಿ ಮನವಿ ಪತ್ರ ಸಲ್ಲಿಸಿದ್ದಾರೆ.