ಕೇಂದ್ರ ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಿ ಕೊಟ್ಟಿದ್ದು, ಈ ಅವಧಿ ಈಗ ಮುಕ್ತಾಯವಾಗಿದೆ. ನೋಂದಾಯಿಸಿಕೊಂಡವರ ಪೈಕಿ ಶೇಕಡ 94.77 ರಷ್ಟು ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ತಿಳಿದು ಬಂದಿದೆ.
ಏಪ್ರಿಲ್ 29ರಿಂದ ಮೇ 6 ರವರೆಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದ್ದು, ಇದಕ್ಕಾಗಿ 80,250 ಮಂದಿ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ 19,279 ಮಂದಿ ವಿಶೇಷ ಚೇತನರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದರು. ಹೀಗಾಗಿ ಒಟ್ಟು 99,529 ಮಂದಿ ಮನೆಯಿಂದ ಮತದಾನ ಮಾಡಲು ನೋಂದಾಯಿಸಿಕೊಂಡಂತಾಗಿತ್ತು.
ಈ ಪೈಕಿ 75, 690 (ಶೇಕಡ 94.32) ಮಂದಿ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ತಮ್ಮ ಹಕ್ಕು ಚಲಾಯಿಸಿದ್ದು, ವಿಶೇಷ ಚೇತನರ ಪೈಕಿ 18,636 (ಶೇಕಡ 96.66) ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ನೋಂದಾಯಿಸಿಕೊಂಡವರ ಪೈಕಿ ಒಟ್ಟು 94,326 ಮಂದಿ ತಮ್ಮ ಮತ ಚಲಾಯಿಸಿದ್ದು, ಒಟ್ಟಾರೆ ಶೇಕಡ 94.77 ಮಂದಿ ತಮ್ಮ ಹಕ್ಕು ಚಲಾಯಿಸಿದಂತಾಗಿದೆ. ಈ ಬಾರಿಯ ಚುನಾವಣಾ ಆಯೋಗದ ಕ್ರಮದ ಕುರಿತು ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.