ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದ 28 ವರ್ಷದ ಯುವಕನೊಬ್ಬ ಪೊಲೀಸರ ಭಯದಲ್ಲಿ ತಾನು ವಧುವಿನೊಂದಿಗೆ ತಂಗಿದ್ದ ಕೋಣೆಯ ಕಿಟಕಿ ಮೂಲಕ ಪರಾರಿಯಾಗಿದ್ದಾನೆ.
ರೋಹ್ಟಕ್‌ನ ಸುಂದನಾ ಗ್ರಾಮದ ಪ್ರದೀಪ್ ಕುಮಾರ್, ಜಜ್ಜರ್‌ನ ಖುಂಗೈ ಗ್ರಾಮದ ಸವಿತಾ ಎಂಬಾಕೆಯನ್ನು ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ದೇವಸ್ಥಾನದಲ್ಲಿ ಅಕ್ಟೋಬರ್ 14 ರಂದು ವಿವಾಹವಾಗಿದ್ದ.
ಅಂದಿನಿಂದ ದಂಪತಿ ಪೊಲೀಸ್ ಭದ್ರತೆಯಲ್ಲೇ ತಂಗಿದ್ದರು. ಸುರಕ್ಷಿತವಾಗಿ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ನವೆಂಬರ್ 2ರವರೆಗೂ ಭದ್ರತೆ ಪಡೆದುಕೊಂಡು ಆ ಮನೆಯಲ್ಲಿಯೇ ಇರಲು ದಂಪತಿಗೆ ಅವಕಾಶವಿತ್ತು. ಯುವಕ – ಯುವತಿ ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದ್ದು, ಪರಸ್ಪರ ಪರಿಚಯ ಪ್ರೇಮವಾಗಿ ಮದುವೆ ಮಾಡಿಕೊಂಡಿದ್ದರು. ಯುವಕ ಪ್ರದೀಪ್ ವಿರುದ್ಧ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣವೊಂದು ದಾಖಲಾಗಿತ್ತು. ಆ ಪ್ರಕರಣದ ವಿಚಾರಣೆ ಇನ್ನೂ ಮುಗಿದಿರಲಿಲ್ಲ.
ಪೊಲೀಸ್ ಭದ್ರತೆಯಲ್ಲೇ ಇದ್ದರೆ ಆ ಕೇಸ್‌ನಲ್ಲಿ ತನ್ನನ್ನು ಬಂಧಿಸಬಹುದು ಎಂಬ ಭಯದಲ್ಲಿ ವರ ಪ್ರದೀಪ್ ಪರಾರಿಯಾಗಿದ್ದಾನೆ. ನವದಂಪತಿ ತಂಗಿದ್ದ ಸೇಫ್ಟಿ ಹೌಸ್‌ಗೆ ಪೊಲೀಸ್ ಭದ್ರತೆ ನೀಡಲಾಗಿತ್ತು. ಹಾಗಾಗಿ ಆತ ಕಿಟಕಿ ಮೂಲಕ ಎಸ್ಕೇಪ್ ಆಗಿದ್ದಾನೆ. ಈ ಬಗ್ಗೆ ಪತ್ನಿ ಸವಿತಾ ದೂರು ದಾಖಲಿಸಿದ್ದು, ವರನ ಪತ್ತೆಗೆ ಪೊಲೀಸರು ಶೋಧ ಮುಂದುವರಿಸಿದ್ದಾರೆ. ವಧುವಿನ ಕುಟುಂಬದಿಂದ ಮದುವೆಗೆ ವಿರೋಧವಿದ್ದಿದ್ದರಿಂದ ದಂಪತಿ ಪೊಲೀಸರ ಸಹಾಯ ಪಡೆದಿದ್ದರು ಅಂತಾ ಅಧಿಕಾರಿಗಳು ತಿಳಿಸಿದ್ದಾರೆ.