ಸಾಕು ನಾಯಿಗಳು ಮಾಲೀಕರ ಪ್ರಾಣ ಉಳಿಸಿರೋ ಅನೇಕ ನಿದರ್ಶನಗಳಿವೆ. ತಮ್ಮನ್ನು ಸಾಕಿ ಸಲಹಿದವರ ರಕ್ಷಣೆಗೆ ಶ್ವಾನಗಳು ಸದಾ ಪ್ರಾಣದ ಹಂಗು ತೊರೆದು ಹೋರಾಡುತ್ತವೆ. ಆದರೆ ಪ್ರೀತಿಯಿಂದ ಸಾಕಿದ ನಾಯಿಗಳೇ ಮಾಲೀಕರಿಗೆ ಹಾನಿ ಮಾಡಿರೋ ಪ್ರಕರಣಗಳು ಕೂಡ ನಡೆದಿವೆ. ಸಾಕು ನಾಯಿ ತನ್ನ ಒಡತಿಯನ್ನೇ ಭಕ್ಷಿಸಿರುವ ಘಟನೆ ಬೆಳಕಿಗೆ ಬಂದಿದೆ. ಅರ್ಜೆಂಟೀನಾದ ಸಾಂಟಾ ರೋಸಾ ನಗರದಲ್ಲಿ ನಡೆದ ಘಟನೆ ಇದು. ಈ ಮಹಿಳೆಯ ಹೆಸರು ಅನಾ ಇನೆಸ್ ಡಿ ಮರೊಟ್ಟೆ. ಮಹಿಳೆಯ ಮನೆ ನಗರದ ವಿಮಾನ ನಿಲ್ದಾಣದ ಪಕ್ಕದಲ್ಲಿದೆ.
ಈ ಮಹಿಳೆ ಬಹಳ ದಿನಗಳಿಂದ ತನ್ನ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದಳು. ಈ ಮಹಿಳೆ ಸುಮಾರು ಒಂದು ವಾರದಿಂದ ಯಾರೂ ಆಕೆಯನ್ನು ಭೇಟಿಯಾಗಿರಲಿಲ್ಲ. ಅವಳ ಮನೆಯಿಂದ ಕೆಟ್ಟ ವಾಸನೆ ಬರುತ್ತಿರುವುದನ್ನು ಅಕ್ಕಪಕ್ಕದವರು ಗಮನಿಸಿದ್ದಾರೆ. ದುರ್ವಾಸನೇ ಹೆಚ್ಚುತ್ತಲೇ ಇದ್ದಿದ್ದರಿಂದ ಅನುಮಾನಗೊಂಡು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಪೊಲೀಸರು ಬಾಗಿಲು ಒಡೆದು ಮನೆಯೊಳಕ್ಕೆ ಪ್ರವೇಶಿಸಿದಾಗ ಅಲ್ಲಿನ ದೃಶ್ಯ ಆಘಾತಕಾರಿಯಾಗಿತ್ತು.
ಮಹಿಳೆ ಅಲ್ಲಿ ಶವವಾಗಿ ಬಿದ್ದಿದ್ದಳು. ಆಕೆ ಪ್ರೀತಿಯಿಂದ ಸಾಕಿದ್ದ ನಾಯಿ ಇನ್ನೂ ನಾಲ್ಕು ಶ್ವಾನಗಳೊಂದಿಗೆ ಸೇರಿಕೊಂಡು ಆಕೆಯ ದೇಹವನ್ನೇ ತಿಂದು ಹಾಕಿತ್ತು. ನಾಯಿಯೇ ಮಹಿಳೆ ಮೇಲೆ ದಾಳಿ ಮಾಡಿ ಕೊಂದಿದೆಯಾ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಮಹಿಳೆ ಮೃತಪಟ್ಟ ಬಳಿಕ ನಾಯಿಗಳೆಲ್ಲಾ ಸೇರಿ ದೇಹವನ್ನು ತಿಂದು ಹಾಕಿರಲೂಬಹುದು. ಮಹಿಳೆಯ ಸಾವಿನ ಸತ್ಯಕ್ಕಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.