ಮದುವೆ ಮನೆಯಲ್ಲಿ ಬಡಿಸುವ ಚಿರೋಟಿಯನ್ನು ನೀವೆಲ್ಲಾ ಸವಿದಿರಿರುತ್ತೀರಿ. ಮನೆಯಲ್ಲಿ ಕೂಡ ಸುಲಭವಾಗಿ ಈ ಚಿರೋಟಿಯನ್ನು ಮಾಡಿಕೊಂಡು ಸವಿಯಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿಗಳು:
1 ಕಪ್ ಚಿರೋಟಿ ರವೆ, ½ ಕಪ್ ನೀರು, 3 ಟೇಬಲ್ ಸ್ಪೂನ್ ತುಪ್ಪ, ಅಕ್ಕಿ ಹಿಟ್ಟು-3 ಟೇಬಲ್ ಸ್ಪೂನ್, ಸಕ್ಕರೆ ಮತ್ತು ಏಲಕ್ಕಿ ಪುಡಿ-1/2 ಕಪ್, ಬಾದಾಮಿ ಪುಡಿ-1/2 ಕಪ್, ಎಣ್ಣೆ-ಕರಿಯಲು.
ಮಾಡುವ ವಿಧಾನ:
ಮೊದಲಿಗೆ ಒಂದು ಬೌಲ್ ಗೆ ರವೆ ಹಾಕಿ ಸ್ವಲ್ಪ ಸ್ವಲ್ಪವೇ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಚೆನ್ನಾಗಿ ನಾದಿಕೊಳ್ಳಿ ಹಿಟ್ಟು ಮೆತ್ತಗಾಗುವವರೆಗೆ. 20 ನಿಮಿಷಗಳ ಕಾಲ ಈ ಹಿಟ್ಟನ್ನು ಹಾಗೆಯೇ ಇಡಿ. ನಂತರ ಒಂದು ಬೌಲ್ ಗೆ 2 ಟೇಬಲ್ ಸ್ಪೂನ್ ತುಪ್ಪ ಹಾಕಿ ಕೈಯಿಂದ ಚೆನ್ನಾಗಿ ತಿರುಗಿಸಿ. ತುಪ್ಪ ಬಣ್ಣ ಬದಲಾಗುವವರೆಗೆ ಚೆನ್ನಾಗಿ ತಿರುಗಿಸಿ.
ನಂತರ ಅಕ್ಕಿ ಹಿಟ್ಟು ಸೇರಿಸಿ ಚೆನ್ನಾಗಿ ತಿರುಗಿಸಿ. ನಂತರ ಚಪಾತಿ ಮಾಡುವ ಕಲ್ಲಿಗೆ ಎಣ್ಣೆ ಸವರಿ ರವೆ ಹಿಟನ್ನು ಅದರ ಮೇಲೆ ತೆಳುವಾಗಿ ಲಟ್ಟಿಸಿಕೊಳ್ಳಿ. ನಂತರ ಅದರ ಮೇಲೆ ಮಾಡಿಟ್ಟುಕೊಂಡ ತುಪ್ಪ ಮತ್ತು ಅಕ್ಕಿಹಿಟ್ಟಿನ ಮಿಶ್ರಣ ಹಚ್ಚಿ.
ಹೀಗೆ ಒಂದೊಂದೇ ಲಟ್ಟಿಸಿಕೊಂಡು ಮಾಡಿಟ್ಟುಕೊಂಡ ಚಪಾತಿಯನ್ನು ಒಂದರ ಮೇಲೊಂದು ಇಡಿ. ನಂತರ ಮಾಡಿಕೊಂಡ ಚಪಾತಿಯನ್ನು ಸುರುಳಿಯಾಗಿ ಸುತ್ತಿಕೊಂಡು ಮಧ್ಯ ಭಾಗ ಕತ್ತರಿಸಿಕೊಳ್ಳಿ. ನಂತರ ಆ ಅರ್ಧ ಭಾಗದಿಂದ ಚಿಕ್ಕ ಚಿಕ್ಕದಾಗಿ ಉಂಡೆ ಮಾಡಿಕೊಂಡು ಚಿಕ್ಕ ಚಪಾತಿ ರೀತಿ ಮಾಡಿಕೊಳ್ಳಿ. ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ನಂತರ ಅದರ ಮೇಲೆ ಸಕ್ಕರೆ ಪುಡಿ ಉದುರಿಸಿ ಬಾದಾಮಿ ಹಾಲನ್ನು ಸೇರಿಸಿ ಸವಿಯಿರಿ.