ಮಸಾಲ ಚಾಯ್ ಚಳಿಗಾಲದ ಸಂಗಾತಿ. ಅದರಲ್ಲೂ ಶೀತ, ಕೆಮ್ಮು ಇದ್ದರಂತೂ ಈ ಮಸಾಲ ಚಾಯ್ ಗೆ ಮನಸ್ಸು ಸದಾ ತವಕಿಸುತ್ತದೆ. ಗಂಟಲಿಗೆ ಹಿತವಾದ ಅನುಭವ ಕೊಡುವುದರ ಜೊತೆಗೆ ದೇಹಕ್ಕೂ ಉಲ್ಲಸದಾಯಕ ಪೇಯ ಇದು. ಮನೆಯ ಮಸಾಲೆಯನ್ನು ಬಳಸಿ ತಯಾರಿಸುವ ಈ ಚಹಾ ಆರೋಗ್ಯಕ್ಕೂ ಒಳ್ಳೆಯದು.
ಮಾರುಕಟ್ಟೆಯಲ್ಲಿ ಮಸಾಲ ಚಾಯ್ ಪೌಡರ್ ಬಹಳ ದುಬಾರಿ. ಒಂದಷ್ಟು ಸಾಮಗ್ರಿಗಳು ಸದಾ ಮನೆಯಲ್ಲಿ ಇರುವಂತೆ ಗಮನ ಹರಿಸಿದರೆ ಮನೆ ಮಂದಿಯೆಲ್ಲಾ ಬೇಕಾದಾಗ ಮಸಾಲ ಚಾಯ್ ಸವಿಯಬಹುದು.
ನೀವು ಸದಾ ಬಳಸುವ ಟೀ ಪುಡಿಯ ಜೊತೆಗೆ ಶುಂಠಿ ಪುಡಿ, ಚಕ್ಕೆ ಪುಡಿ, ಲವಂಗ ಹಾಗೂ ಏಲಕ್ಕಿ ಪುಡಿಯನ್ನು ಬಳಸಿ ಚಹಾ ಮಾಡಿದರೆ ಘಮ ಘಮ ಎನ್ನುವ ಮಸಾಲ ಚಾಯ್ ಐದು ನಿಮಿಷದಲ್ಲಿ ತಯಾರು ಮಾಡಬಹುದು.